ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
- ಬೇಸಿಗೆಗೂ ಮುನ್ನವೇ ಹರಿಹರಪುರದಲ್ಲಿ ನೀರಿಗೆ ಹಾಹಾಕಾರ
- ಜೆಜೆಎಂನಿಂದ ಕಲುಷಿತ ಜಲ ಪೂರೈಕೆ
- ಗ್ರಾಮದಲ್ಲಿ ಕಾಡುತ್ತಿದೆ ಆರೋಗ್ಯ ಸಮಸ್ಯೆ
ಹಾಸನ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ರಾಜ್ಯಕ್ಕೆ ನೀರುಣಿಸುವ ಹೇಮೆಯ ತವರಿನಲ್ಲೇ ಕುಡಿಯುವ ನೀರಿಗೆ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ.
ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಸರಬರಾಜು ಇಲ್ಲದೆ ಹರಿಹರಪುರ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನಲವತ್ತಕ್ಕೂ ಹೆಚ್ಚು ಮನೆಗಳಿರುವ ಹರಿಹರಪುರ ಗ್ರಾಮಕ್ಕೆ ಒಂದು ತಿಂಗಳಿನಿಂದ ನೀರು ಸರಬರಾಜು ಆಗುತ್ತಿಲ್ಲ. ಎರಗು ಗ್ರಾ.ಪಂ.ನಿಂದ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಕಳೆದ ಒಂದು ತಿಂಗಳಿನಿಂದ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಪೂರೈಕೆಯಾಗದೆ ಗ್ರಾಮದ ಜನರು ಪರದಾಡುತ್ತಿದ್ದಾರೆ. ಮೋಟಾರ್ ಆನ್ ಮಾಡಿದರು ನೀರು ಎತ್ತುತ್ತಿಲ್ಲ ಎಂದು ಗ್ರಾ.ಪಂ. ಅಧಿಕಾರಿಗಳು ಹೇಳುತ್ತಿದ್ದಾರೆ.
ಗ್ರಾಮಸ್ಥರ ನೀರಿನ ಸಮಸ್ಯೆ ಬಗೆಹರಿಸಲು ಜೆಜೆಎಂ ಯೋಜನೆಯಿಂದ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ ನೀರು ಕಲುಷಿತಗೊಂಡಿರುವುದರಿಂದ ಕುಡಿಯಲು ಸಾಧ್ಯವಾಗದೆ ಪರದಾಡುವಂತಾಗಿದೆ.
ಕಿಲೋಮೀಟರ್‌ಗಟ್ಟಲೆ ದೂರ ಹೋಗಿ ರೈತರ ಜಮೀನಿನಿಂದ ಕುಡಿಯುವ ನೀರು ಹಿಡಿದುಕೊಂಡು ಗ್ರಾಮಸ್ಥರು ತರುತ್ತಿದ್ದಾರೆ. ಗ್ರಾ.ಪಂ. ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಆರೋಗ್ಯ ಸಮಸ್ಯೆ: ಹರಿಹರಪುರದಲ್ಲಿ ಜೆಜೆಎಂ ಕಲುಷಿತ ನೀರು ಕುಡಿದು ಮಹಿಳೆಯರು, ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಮಕ್ಕಳು ಮಹಿಳೆಯರಲ್ಲಿ ಶೀತ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಅನ್ನ ಇಲ್ಲದೆ ಬದುಕಬಹುದು. ನೀರು ಇಲ್ಲದೆ ಬದುಕಲು ಅಸಾಧ್ಯ. ಹೀಗಾಗಿ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಜೆಜೆಎಂ ಯೋಜನೆಯಲ್ಲಿ ಕಲುಷಿತ ನೀರು ಪೂರೈಸಲಾಗುತ್ತಿದೆ. ಇದರಿಂದ ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿದೆ. ಅಧಿಕಾರಿಗಳು ಪರೀಕ್ಷಿಸಿ ನೀರು ಬಿಡಬೇಕು. ಕೂಲಿ ಮಾಡಿ ಬದುಕು ನಡೆಸುತ್ತಿದ್ದೇವೆ. ಆದಷ್ಟು ಬೇಗ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಗ್ಯಾರಂಟಿ ಬದಲು ನೀರಿನ ಗ್ಯಾರಂಟಿ ಕೊಡಲಿ.
ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಸರಿದೂಗಿಸಲು ಜೆಜೆಎಂ ನೀರು ಬಿಡಲಾಗುತ್ತಿದೆ. ಆದರೆ ನೀರು ಕುಡಿಯಲು ಯೋಗ್ಯವಾಗಿಲ್ಲ, ವಾಸನೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೀರಿನ ಪರೀಕ್ಷೆ ನಡೆಸಲಾಗಿದ್ದು, ನೀರಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಂಜಿನಿಯರ್ ಜತೆ ಚರ್ಚಿಸಲಾಗಿದೆ. ಈ ಬಗ್ಗೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ಕರೆದಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.