ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಲು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಸಾಗುತಿರುವುದು.
ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಸಂಸತ್ ಚುನಾವಣೆ ಶುಕ್ರವಾರ ನಡೆಯಿತು.
ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂವಿಧಾನಿಕ ಹಕ್ಕಿನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮೊಬೈಲ್ ಇವಿಎಂ ಮೂಲಕ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಿ ವಿಶೇಷತೆ ಮೆರೆದರು.
ವಿದ್ಯಾರ್ಥಿಗಳು ಉತ್ಸಾಹದಿಂದ ನಾಮಪತ್ರ ಸಲ್ಲಿಸಿ, ಮತಯಾಚನೆ ನಡೆಸಿ, ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು. ನೈಜ ಚುನಾವಣೆಯ ಅನುಭವ ನೀಡುವ ಸಲುವಾಗಿ ಶಾಲೆಯಲ್ಲಿ ಗೌಪ್ಯ ಮತದಾನಕ್ಕೆ ಮತಗಟ್ಟೆ ಸಿದ್ಧಪಡಿಸಲಾಗಿತ್ತು. ಮತಗಟ್ಟೆ ಅಧಿಕಾರಿಗಳ ಕರ್ತವ್ಯ ನಿರ್ವಹಿಸಿದ ಶಿಕ್ಷಕರು, ವಿದ್ಯಾರ್ಥಿಗಳಿಂದ ಗುರುತಿನ ಚೀಟಿ ಪರಿಶೀಲಿಸಿ ಸಹಿ ಪಡೆದು, ಎಡಗೈ ಬೆರಳಿಗೆ ಶಾಯಿ ಹಾಕಿಸಿದರು. ಬಳಿಕ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು, ಮೊಬೈಲ್‌ನಲ್ಲಿ ಅಳವಡಿಸಲಾಗಿದ್ದ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಮೂಲಕ ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.
ಮತ ಚಲಾಯಿಸಿದ ಬಳಿಕ ಕೇಳಿಬಂದ ಬೀಪ್ ಶಬ್ದಕ್ಕೆ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಕಾಗದ ರಹಿತವಾಗಿ ಅಚ್ಚುಕಟ್ಟಾಗಿ ನಡೆದ ಚುನಾವಣೆಯ ಫಲಿತಾಂಶವನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಿಸಲಾಯಿತು.
7ನೇ ತರಗತಿಯ ಕೀರ್ತನ್ ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಅದೇ ತರಗತಿಯ ಸ್ನೇಹ ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದರು.
ನೂತನ್, ವಿನಯ್, ಸಿರಿ, ಭುವನ್ ಸೇರಿದಂತೆ ಇತರರು ವಿವಿಧ ಸಚಿವರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.
ತಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡಿದ ಸಂತಸದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್, ಶಿಕ್ಷಕರಾದ ಪರಮೇಶ್, ಸಾಗರ್, ಶಿಕ್ಷಕಿ ದಿವ್ಯಾ, ಅಂಗನವಾಡಿ ಶಿಕ್ಷಕಿ ಮಂಜುಳಾ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಶಣವಿನಕುಪ್ಪೆ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಸಿಬ್ಬಂದಿ ರಾಧಾ, ಪಾರ್ವತಿ, ಜಯಮ್ಮ ಇತರರಿದ್ದರು.