ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ವಲಸೆ ಕಾರ್ಮಿಕರು ವಾಸಿಸುವ ಮನೆಗಳಿಗೆ ಆಶಾ ಕಾರ್ಯಕರ್ತೆಯರು ತೆರಳಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಅರಿವು ಮೂಡಿಸಿ ಲಸಿಕೆ ಹಾಕಿಸಲು ಮುಂದಾಗಿರುವುದು
ಬೇಲೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಯಶಸ್ವಿಯಾಗಲು ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು ಮಳೆಯನ್ನೂ ಲೆಕ್ಕಿಸದೆ, ವಲಸೆ ಕೂಲಿ ಕಾರ್ಮಿಕರ ಮನೆಗಳಿಗೆ ತೆರಳಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವಂತೆ ಪಾಲಕರಿಗೆ ಜಾಗೃತಿ ಮೂಡಿಸಿ ಮಕ್ಕಳಿಗೆ ಲಸಿಕೆ ಹಾಕಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಭಾನುವಾರ ಪಲ್ಸ್ ಪೋಲಿಯೊ ಅಂಗವಾಗಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬೂತ್‌ಗಳಲ್ಲಿ ಈಗಾಗಲೇ ಪೋಲಿಯೋ ಲಸಿಕೆ ಹಾಕಲಾಗಿತ್ತು. ಜತೆಗೆ ಇನ್ನೂ ನಾಲ್ಕು ದಿನಗಳವರೆಗೆ ಲಸಿಕೆ ಹಾಕಿಸಲು ಕಾಲವಕಾಶವಿದ್ದು, ಯಾವುದೇ ಮಕ್ಕಳು ಇದರಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಹಾಗೂ ಅರೇಹಳ್ಳಿಯಲ್ಲಿ ಸೋಮವಾರ ವಾರದ ಸಂತೆ ಹಾಗೂ ರಜೆ ಇರುವುದರಿಂದ ಕೂಲಿ ಕಾರ್ಮಿಕರು ಕೆಲಸ, ಬಟವಾಡೆ ಮತ್ತು ಇತರ ಕೆಲಸಗಳಲ್ಲಿ ತೊಡಗಿಕೊಂಡು ಮಕ್ಕಳಿಗೆ ಲಸಿಕೆ ಹಾಕಿಸಲು ಮರೆತು ಬಿಡುವ ಸಾಧ್ಯತೆ ಇರುವುದನ್ನು ಮನಗಂಡ ಕಾರ್ಯಕರ್ತೆಯರು, ವಲಸಿಗರು ಹೆಚ್ಚಾಗಿ ವಾಸಿಸುವ ಪ್ರದೇಶ ಹಾಗೂ ಮನೆಗಳಿಗೆ ಭೇಟಿ ನೀಡಿ ಲಸಿಕೆ ಕುರಿತು ಪಾಲಕರಿಗೆ ಮಾಹಿತಿ ನೀಡುತ್ತಿದ್ದಾರೆ.
ಅಲ್ಲದೆ ಮಲೆನಾಡು ಪ್ರದೇಶವಾದ ಅರೇಹಳ್ಳಿ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕೂಲಿ ಕಾರ್ಮಿಕರು ನೆಲೆಸಿದ್ದಾರೆ. ಅವರಿಗೆ ಪೋಲಿಯೊ ಲಸಿಕೆಯ ಅರಿವಿನ ಕೊರತೆಯಿಂದಾಗಿ ಮಕ್ಕಳಿಗೆ ಲಸಿಕೆ ಹಾಕಿಸದ ಕಾರಣ ಲಸಿಕೆಯಿಂದ ಹೊರಗುಳಿಯದಂತೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ನೀಡಿ ಲಸಿಕೆ ಹಾಕುತ್ತಿರುವುದು ಆರೋಗ್ಯ ಸಿಬ್ಬಂದಿ ಕೈಗೊಂಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.