ವಿಶ್ವ ಪರಿಸರ ದಿನ ಅಂಗವಾಗಿ ಬೋರನಕಪ್ಪಲು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ಅರಸೀಕೆರೆಯ ಆದಿಚುಂಚನಗಿರಿ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಸಿ ನೆಟ್ಟು ಖುಷಿಪಟ್ಟರು.
ಅರಸೀಕೆರೆ ಗ್ರಾಮಾಂತರ: ಅರಸೀಕೆರೆ ನಗರದ ಶ್ರೀ ಆದಿಚುಂಚನಗಿರಿ ಆಂಗ್ಲ ಶಾಲೆಯ ಶಿಕ್ಷಕರು ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ತಾಲೂಕಿನ ಬೋರನಕೊಪ್ಪಲು ಗ್ರಾಮದ ಸಮೀಪದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ, ಕಾರ್ಯ ವೈಖರಿ ವೀಕ್ಷಿಸಿದರು.
ಶಾಲೆಯ ಮುಖ್ಯಶಿಕ್ಷಕಿ ಜ್ಞಾನೇಶ್ವರಿ, ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, 110 ಎಕರೆ ವ್ಯಾಪ್ತಿಯ ಸಂಶೋಧನಾ ಭೂಪ್ರದೇಶವನ್ನು ವೀಕ್ಷಿಸಿದರು. ಅಲ್ಲಿ ವಿಶೇಷವಾಗಿ ಬೆಳೆಸಲಾಗುತ್ತಿರುವ ತರಹೇವಾರಿ ತೆಂಗಿನ ತಳಿಗಳನ್ನು ವೀಕ್ಷಿಸಿದರು. ನಂತರ ಪೇರಳೆ, ಸಪೋಟ, ಸೀತಾಫಲ, ಹುಣಸೆ ಮತ್ತು ನೇರಳೆ ಹಣ್ಣಿನ ಮರಗಳನ್ನು ವೀಕ್ಷಿಸಿದರು. ನೇರಳೆ ಹಣ್ಣು, ಸ್ಟಾರ್ ಫ್ರೂಟ್ ಸವಿದು ಖುಷಿಪಟ್ಟರು.
ಎರೆಹುಳುಗಳಿಂದ ತಯಾರಾಗುವ ಸಾವಯವ ಗೊಬ್ಬರದ ಪ್ರಯೋಗಾಲಯಕ್ಕೆ ಭೇಟಿ ಕೊಟ್ಟು ಅದರ ಉಪಯೋಗ ಕುರಿತು ಸಂಶೋಧನಾ ವಿಜ್ಞಾನಿ ಕುಶಾಲಾ ಅವರಿಂದ ಮಾಹಿತಿ ಪಡೆದರು.
ವಿದ್ಯಾರ್ಥಿಗಳಿಗೆ ಪಿಯು ನಂತರ ತೋಟಗಾರಿಕಾ ವಿಭಾಗದಲ್ಲಿ ಇರುವಂತಹ ವಿವಿಧ ಪದವಿಗಳ ಬಗ್ಗೆ, ಅವುಗಳನ್ನು ಅಭ್ಯಾಸ ಮಾಡುವುದರಿಂದ ಮಾಡಬಹುದಾದ ವೃತ್ತಿ ಬದುಕಿನ ಬಗ್ಗೆ ತಿಳಿಸಿಕೊಡಲಾಯಿತು.
ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಡಾ.ಕಾಂತರಾಜು, ಇತರರು ಇದ್ದರು.