ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-2020ರ ಪ್ರಸ್ತಾವಿತ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ವಿಶ್ವ ಹಿಂದು ಪರಿಷದ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
- ರಾಜ್ಯ ಸರ್ಕಾರ ವಿರುದ್ಧ ವಿಶ್ವ ಹಿಂದು ಪರಿಷದ್ ಪ್ರತಿಭಟನೆ
- ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-2020ರ ಪ್ರಸ್ತಾವಿತ ತಿದ್ದುಪಡಿ
- ಜಿಲ್ಲಾಡಳಿತಕ್ಕೆ ಮನವಿ
ಹಾಸನ: ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ-2020ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಆಶಯಕ್ಕೆ ಹಾಗೂ ರಾಜ್ಯದ ಮತ್ತು ಹಿಂದು ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿದ್ದು, ವಿಧಾನಸಭೆಯಲ್ಲಿ ಮಂಡಿಸದಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷದ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದು ಸಮಾಜದ ಧಾರ್ಮಿಕ ಭಾವನೆಗಳಿಗೆ ಹಾನಿಯಾಗುವ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂಬ ಆರೋಪಗಳಿಗೆ ಇದೀಗ ಮತ್ತೊಂದು ತಿದ್ದುಪಡಿ ಕಾರಣವಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ 2020ರಲ್ಲಿ ಪ್ರಮುಖ ಬದಲಾವಣೆ ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ತೀವ್ರ ಉದ್ವಿಗ್ನತೆಯನ್ನುಂಟುಮಾಡಿದೆ ಎಂದರು.
ಬೆಳಗಾವಿ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಅಕ್ರಮ ಗೋವು ಸಾಗಾಟಕ್ಕೆ ಬಳಸುವ ವಾಹನಗಳ ಬಿಡುಗಡೆಯ ನಿಯಮವನ್ನು ಸಡಿಲಗೊಳಿಸುವ ತಿದ್ದುಪಡಿಯನ್ನು ಸರ್ಕಾರ ಮಂಡಿಸಲು ತಯಾರಿ ನಡೆಸುತ್ತಿದೆ. ಇದೀಗ ಜಾರಿಗೆ ಇರುವ ಕಾಯಿದೆಯ ಸೆಕ್ಷನ್ 8ರ ಪ್ರಕಾರ, ಗೋಮಾಂಸವನ್ನು ಅಕ್ರಮವಾಗಿ ಸಾಗಣೆ ಮಾಡುವಾಗ ವಶಪಡಿಸಿದ ವಾಹನವನ್ನು ಬಿಡುಗಡೆ ಮಾಡಿಸಿಕೊಳ್ಳಲು ವಾಹನದ ಮೌಲ್ಯದಷ್ಟು ಬ್ಯಾಂಕ್ ಗ್ಯಾರಂಟಿ ಒಡ್ಡಬೇಕಾಗುತ್ತದೆ. ಉದಾಹರಣೆಗೆ ವಾಹನದ ಮೌಲ್ಯ 5 ಲಕ್ಷ ರೂಪಾಯಿ ಇದ್ದರೆ ಅದೇ ಮೌಲ್ಯದ ಬ್ಯಾಂಕ್ ಗ್ಯಾರಂಟಿ ಸಲ್ಲಿಸಿದರೆ ಮಾತ್ರ ತಾತ್ಕಾಲಿಕವಾಗಿ ವಾಹನ ಬಿಡುಗಡೆ ಸಾಧ್ಯ. ಪ್ರಕರಣದಲ್ಲಿ ಅಪರಾಧ ಸಾಬೀತಾದಲ್ಲಿ ವಾಹನವನ್ನು ಮತ್ತೆ ಸರ್ಕಾರ ಮುಟ್ಟುಗೋಲು ಹಾಕಬೇಕು. ಇಲ್ಲದಿದ್ದರೆ ಬ್ಯಾಂಕ್ ಗ್ಯಾರಂಟಿಯ ಹಣ ಸರ್ಕಾರಕ್ಕೆ ಸೇರುತ್ತದೆ ಎಂದು ಹೇಳಿದರು.
ಈ ಕ್ರಮದಿಂದ ಅಕ್ರಮ ಗೋವು ಸಾಗಣೆ ಕಡಿಮೆಯಾಗಲು ಕಾರಣವಾಗಿದ್ದು, ಸಾವಿರಾರು ಗೋವಂಶ ರಕ್ಷಣೆಗೊಂಡಿದೆ ಎಂದು ವಿಶ್ವ ಹಿಂದು ಪರಿಷತ್ ಹೇಳಿದೆ. ಆದರೆ, ಕಾಂಗ್ರೆಸ್ ಸರ್ಕಾರ ಈ ಕಠಿಣ ನಿಯಮವನ್ನು ಹಿಂಪಡೆದು ಕೇವಲ ಬಾಂಡ್ ನೀಡಿದರೂ ವಾಹನ ಬಿಡುಗಡೆ ಸಾಧ್ಯವಾಗುವಂತೆ ಮಾಡಿದೆ. ಅಕ್ರಮ ಗೋಸಾಗಾಟಕ್ಕೆ ನೇರ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಗ್ಯಾರಂಟಿ ನಿಯಮದಿಂದ ಅಕ್ರಮ ಸಾಗಣೆದಾರರಿಗೆ ತಡೆ ಉಂಟಾಗಿತ್ತು. ಈಗ ಅದನ್ನೇ ತೆರವುಗೊಳಿಸುವ ಮೂಲಕ ಸರ್ಕಾರ ಗೋ ಕಳ್ಳ ಸಾಗಿಸುವವರಿಗೆ ಪರೋಕ್ಷ ಬೆಂಬಲ ನೀಡುತ್ತಿದೆ. ‘ಗೋ ಕಳ್ಳಸಾಗಣೆದಾರರೊಂದಿಗೆ ನಾವಿದ್ದೇವೆ’ ಎಂಬ ಸಂದೇಶ ನೀಡುವಂತಾಗಿದೆ. ಈ ತಿದ್ದುಪಡಿ ಜಾರಿಗೆ ಬಂದರೆ, ಹಿಂದು ಸಮಾಜಕ್ಕೆ ಪವಿತ್ರವಾಗಿರುವ ಗೋವಂಶದ ಮೇಲೆ ಹಿಂಸೆ ಹೆಚ್ಚಾಗುವ ಅಪಾಯವಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿ ಜನರಲ್ಲಿ ಉದ್ವಿಗ್ನತೆ ಹೆಚ್ಚಲಿದೆ. ಈ ತಿದ್ದುಪಡಿ ಸಂಪೂರ್ಣವಾಗಿ ಜನಾಭಿಪ್ರಾಯಕ್ಕೆ ವಿರುದ್ಧವಾಗಿದ್ದು, ರಾಜ್ಯ ಸರ್ಕಾರವೇ ಸಮಾಜವನ್ನು ಪ್ರಚೋದಿಸುವಂತೆ ವರ್ತಿಸುತ್ತಿದೆ. ತಿದ್ದುಪಡಿಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಲೋಕೇಶ್, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಗೋರಕ್ಷಕ ಶರತ್, ವಿಭಾಗ ಕಾರ್ಯದರ್ಶಿ ಮಹಿಪಾಲ್, ಜಿಲ್ಲಾಧ್ಯಕ್ಷ ಅನೂಪ್, ಜಿಲ್ಲಾ ಕಾರ್ಯದರ್ಶಿ ವಿಕಾಸ್, ಜಿಲ್ಲಾ ಸಹಕಾರ್ಯದರ್ಶಿ ಮಂಜು, ಜಿಲ್ಲಾ ಉಪಾಧ್ಯಕ್ಷ ಸಾಯಿ ಪ್ರಸಾದ್, ಪ್ರಣವ್ ಭಾರದ್ವಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಪ್ರಾಂತ ಸಹ ಮಂದಿರ ಅರ್ಚಕ ರಕ್ಷಿತ್ ಭಾರದ್ವಾಜ್, ಗಿರೀಶ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೇತ್ರವತಿ ಮಂಜುನಾಥ್, ವೇಧಾವತಿ, ಚನ್ನಕೇಶವ, ಗೋ ರಕ್ಷಕ ಪ್ರಮುಖ ಶಶಿಧರ್, ಪ್ರಮೋದ್, ಕಟ್ಟಾಯ ಶಿವಕುಮಾರ್ ಇತರರು ಇದ್ದರು.