ಬೆಟ್ಟದ ಭೈರವೇಶ್ವರ ದೇವಾಲಯದ ಅವರಣದಲ್ಲಿ ಗ್ರಾಮಸ್ಥರು ಸಭೆ ನಡೆಸಿ ಚೀತ್ರಿಕರಣಕ್ಕೆ ನಿಷೇದ ಹೇರುವಂತೆ ಆಗ್ರಹಿಸಿದರು. 
ಹಾಸನ

ವಿಡಿಯೋ ಚಿತ್ರೀಕರಣ ನಿಷೇಧಕ್ಕೆ ಆಗ್ರಹ

ಸಕಲೇಶಪುರ: ಫೋಟೋ ಗ್ರಾಫರ್ಸ್‌ ಹಾವಳಿಯಿಂದಾಗಿ ಪುರಾತನ ಭೈರವೇಶ್ವರ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ. ಆದ್ದರಿಂದ ದೇವಾಲಯದ ಆವರಣದಲ್ಲಿ ಫೋಟೋಗ್ರಫಿ ನಿಷೇಧಿಸಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಭಾನುವಾರ ವಿವಿಧ ಸಂಘಟನೆಗಳ ಮುಖಂಡರು, ಸುತ್ತಲಿನ ಗ್ರಾಮಸ್ಥರು ದೇವಾಲಯದ ಅವರಣದಲ್ಲಿ ಸಭೆ ನಡೆಸಿ ಫೋಟೋಗ್ರಾಫರ್ಸ್‌ಗಳ ವರ್ತನೆ ಖಂಡಿಸಿದರು. ಬಳಿಕ ಮಾತನಾಡಿದ ಮುಖಂಡರು, ತಾಲೂಕಿನ ಮರಗುಂದ ಗ್ರಾಮದ ಬೆಟ್ಟದ ಭೈರವೇಶ್ವರ ದೇವಾಲಯದ ಅವರಣದಲ್ಲಿ ಅಸಭ್ಯವಾಗಿ ಪ್ರೀ ವೆಡ್ಡಿಂಗ್ ಶೂಟ್ ಚಿತ್ರೀಕರಣ ನಡೆಸುತ್ತಿದ್ದ ಫೋಟೋ ಗ್ರಾಫರ್ಸ್‌ಗಳನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ನಡೆದು ಪ್ರಕರಣ ಅಂತಿಮವಾಗಿ ಹಲ್ಲೆಯಲ್ಲಿ ಅಂತ್ಯಗೊಂಡಿತ್ತು. ಫೋಟೋಗ್ರಾಫರ್‌ಗಳ ವರ್ತನೆ ಖಂಡನೀಯ ಎಂದರು.
ದೇವಸ್ಥಾನ ದಶಕದಿಂದ ಪ್ರವಾಸಿತಾಣವಾಗಿ ಬದಲಾಗಿದ್ದು ರಾಜ್ಯದ ವಿವಿಧೆಡೆಯಿಂದ ನಿತ್ಯ ನೂರಾರು ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಬಹುತೇಕರು ಮೋಜು-ಮಸ್ತಿಗಾಗಿ ಬರುತ್ತಾರೆ. ಅಸಭ್ಯವಾಗಿ ಬಟ್ಟೆ ಧರಿಸಿ ದೇಗುಲಕ್ಕೆ ಆಗಮಿಸುವ ಮೂಲಕ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ. ದೇಗುಲದ ಕಟ್ಟೆಯ ಮೇಲೆ ಚಪ್ಪಲಿ ಧರಿಸಿ ಕೂರುತ್ತಾರೆ. ಇದು ಹಲವು ಬಾರಿ ಸ್ಥಳೀಯರೊಂದಿಗೆ ವಾಗ್ವಾದಕ್ಕೂ ಕಾರಣವಾಗಿದೆ ಎಂದು ಹೇಳಿದರು.
ಬೆಳ್ಳಂ ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸುವ ಫೋಟೋಗ್ರಾಫರ್ಸ್‌ಗಳು ವಿಡಿಯೋ ಚಿತ್ರೀಕರಣದಲ್ಲಿ ತೊಡಗುವುದರಿಂದ ಅರ್ಚಕರಿಗೆ ನೆಮ್ಮದಿಯಿಂದ ಪೂಜೆ ಸಲ್ಲಿಸಲು ಆಗುತ್ತಿಲ್ಲ. ಅವರ ಗದ್ದಲದಿಂದ ಪೂಜೆ ಸಲ್ಲಿಸಲು ಅಡಚಣೆ ಆಗುತ್ತಿದೆ. ಹಲವು ಬಾರಿ ದೇವಾಲಯದ ಮುಂದಿನ ಬಾಗಿಲು ಹಾಕಿಕೊಂಡು ಪೂಜೆ ಮಾಡಿರುವ ಉದಾಹರಣೆಗಳಿವೆ. ಶುಕ್ರವಾರ ಆಗಮಿಸಿದ್ದ ಫೋಟೋಗ್ರಾಫರ್ಸ್‌ಗಳ ಉಡಾಫೆ ವರ್ತನೆ ಸ್ಥಳೀಯರನ್ನು ಕೆರಳುವಂತೆ ಮಾಡಿದೆ. ಘಟನೆಯ ವೇಳೆ ಫೋಟೋಗ್ರಾಫರ್ಸ್‌ ತಾವು ಮಾಡಿದ ತಪ್ಪುಗಳನ್ನು ಮುಚ್ಚಿಟ್ಟುಕೊಂಡು ತಮಗೆ ಅನುಕೂಲವಾಗುವಂತ ವಿಡಿಯೋಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ಈ ಘಟನೆ ಮುಂದೆ ದೇವಸ್ಥಾನಕ್ಕೆ ಆಗಮಿಸುವವರಿಗೆ ಒಂದು ಪಾಠವಾಗಲಿದೆ. ಆದ್ದರಿಂದ, ಮುಂದಿನ ದಿನಗಳಲ್ಲಿ ದೇವಾಲಯದ ಅವರಣದಲ್ಲಿ ಚಿತ್ರೀಕರಣಕ್ಕೆ ತಾಲೂಕು ಆಡಳಿತ ನಿಷೇಧ ಹೇರಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಮುಖಂಡರಾದ ದೇವಾಲದಕೆರೆ ಲೋಕೇಶ್, ರಂಗನಾಥ್, ಹಿಂದೂಪರ ಸಂಘಟನೆಯ ರಘು ಉಪಸ್ಥಿತರಿದ್ದರು.