ಕಳವಿಗೆ ಯತ್ನಿಸಿ ಸಿಕ್ಕಿಬಿದ್ದ ದುಷ್ಕರ್ಮಿಯನ್ನು ಮೆಳ್ಳಹಳ್ಳಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವುದು.
ಹಿರೀಸಾವೆ: ಹೋಬಳಿಯ ಗಡಿಭಾಗದ ಮೆಳ್ಳಹಳ್ಳಿ ಗ್ರಾಮದಲ್ಲಿ ಕಳ್ಳತನ ಮಾಡಲು ಯತ್ನಿಸಿದ ದುಷ್ಕರ್ಮಿಯೊಬ್ಬನನ್ನು ಹಿಡಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಲ್ಲವಳ್ಳಿ ಗ್ರಾಮದ ಪೃಥ್ವಿರಾಜ್ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದವನು.
ಹೋಬಳಿಯ ಮೆಳ್ಳಹಳ್ಳಿಯ ಮೂಡಲ ಬೋರೆ ಪ್ರದೇಶದಲ್ಲಿ ಆನಂದ್ ಎಂಬುವರ ತೋಟದ ಮನೆಯಲ್ಲಿ ಅವರ ತಾಯಿ ಸೋಮವಾರ ಬೆಳಗ್ಗೆ ಮನೆಗೆ ಬೀಗ ಹಾಕಿ ಅಲ್ಲಿಯೇ ಚಪ್ಪಲಿಗಳ ಕೆಳಗೆ ಕೀ ಇರಿಸಿ ಪಕ್ಕದ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಲೆಂದು ತೆರಳಿದ್ದರು.
ಇದೇ ಸಮಯವನ್ನು ಹೊಂಚು ಹಾಕಿ ನೋಡುತ್ತಿದ್ದ ಪೃಥ್ವಿರಾಜ್ ಮನೆ ಒಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ. ಇದೇ ವೇಳೆ ಏಣಿ ಕೇಳಲೆಂದು ಮನೆಗೆ ಬಂದ ನೆರೆಯ ಜಮೀನಿನ ಶಿವರಾಜು ಎಂಬುವರು ಮನೆ ಮುಂದಿನ ಬಾಗಿಲು ತೆಗೆದಿರುವುದನ್ನು ಗಮನಿಸಿ ಒಳಗೆ ಹೋಗಿದಾಗ ವಸ್ತುಗಳನ್ನು ಬಿಸಾಡುತ್ತಿರುವ ಶಬ್ದ ಕೇಳಿಬಂದಿದೆ. ಮನೆಯ ಒಳಗೆ ಯಾರೋ ಬೀರುವಿನ ಡೋರ್ ತೆಗೆದು ಕಳ್ಳತನ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅಕ್ಕ ಪಕ್ಕದ ಜಮೀನಿನಲ್ಲಿ ವಾಸವಿರುವ ಸ್ಥಳೀಯರನ್ನು ಕೂಗಿದ್ದಾರೆ.
ನೆರೆಹೊರೆಯವರು ದೊಣ್ಣೆಗಳನ್ನು ಹಿಡಿದು ಮನೆ ಜಾಲಾಡಿದಾಗ ಕೊಠಡಿಯಲ್ಲಿ ದುಷ್ಕರ್ಮಿ ಮೂಲೆಯಲ್ಲಿ ನಿಂತಿರುವುದನ್ನು ನೋಡಿ, ಆತನ ಕೈಗಳನ್ನು ಹಿಂಬದಿಯಾಗಿ ಕಟ್ಟಿ ಹೊರಗಡೆ ಕರೆತಂದು ಆತನಿಗೆ ಥಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಹಿರೀಸಾವೆ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.
ದುಷ್ಕರ್ಮಿ ಕದಬಹಳ್ಳಿ ಗ್ರಾಮದಲ್ಲಿ ಮೊಬೈಲ್ ಶಾಪ್ ಹೊಂದಿದ್ದು, ಆಗಾಗ ಕಳ್ಳತನ ಮಾಡುವುದಾಗಿ ತಿಳಿದುಬಂದಿದೆ. ಬೆಂಗಳೂರಿನ ವಿವಿಧೆಡೆ ಹಲವು ಕಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದು ಈತನ ಮೇಲೆ ಸಾಕಷ್ಟು ಪ್ರಕರಣಗಳು ಇರುವುದಾಗಿ ಹಿರಿಸಾವೆ ಠಾಣೆ ಪೊಲೀಸರು ತಿಳಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.