ಹಾಸನ ನಗರದ ಪತ್ರಕರ್ತರ ಭವನದಲ್ಲಿ ಜೀತ ಕಾರ್ಮಿಕ ಪದ್ಧತಿ ಮತ್ತು ಮಾನವ ಕಳ್ಳಸಾಗಣೆ ಕುರಿತು ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ವರ್ಗಿಸ್ ಮಾತನಾಡಿದರು. ವಿಭಾ ವರ್ಗಿಸ್, ಯೇಸುದಾಸ್, ಚನ್ನಬಸವೇಶ್ವರ, ಗಿರೀಶ್ ಇದ್ದರು. 
ಹಾಸನ

ಶೋಷಣೆಗೆ ಒಳಗಾದವರ ನೆರವಿಗಿದೆ ‘ವಿಕಸನ’

ಪ್ರಮುಖ ಮುಖ್ಯಾಂಶಗಳು

  • ಶೋಷಣೆಗೆ ಒಳಗಾದವರ ನೆರವಿಗಿದೆ ‘ವಿಕಸನ’
  • ಸಂಸ್ಥೆಯ ಮುಖ್ಯಸ್ಥ ವರ್ಗಿಸ್ ಭರವಸೆ
  • ಜೀತ ಕಾರ್ಮಿಕ ಪದ್ಧತಿ, ಮಾನವ ಕಳ್ಳಸಾಗಣೆ ಕುರಿತು ಕಾರ್ಯಾಗಾರ
ಹಾಸನ: ಆಧುನಿಕ ಸಮಾಜ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ಜೀತ ಪದ್ಧತಿ ಮತ್ತು ಮಾನವ ಕಳ್ಳಸಾಗಣೆ ಎಂಬ ಅಮಾನವೀಯ ಪಿಡುಗು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂದು ವಿಕಸನ ಸಂಸ್ಥೆ ಮುಖ್ಯಸ್ಥ ವರ್ಗಿಸ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜೀತ ಕಾರ್ಮಿಕ ಪದ್ಧತಿ ಮತ್ತು ಮಾನವ ಕಳ್ಳಸಾಗಣೆ ಕುರಿತು ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಬಡತನ, ಅನಕ್ಷರತೆ, ಸಾಮಾಜಿಕ ಅಸಮಾನತೆ ಮತ್ತು ಸಾಲ ಬಾಧೆಗಳಿಂದ ಅನೇಕರು ಶೋಷಣೆಯ ಬಲೆಗೆ ಸಿಲುಕುತ್ತಿದ್ದು, ಅಂಥವರನ್ನು ರಕ್ಷಿಸಿ ಸ್ವಾಭಿಮಾನದ ಬದುಕಿನತ್ತ ಕೊಂಡೊಯ್ಯುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು.
ಹಾಸನ ಜತೆಗೆ ಚಿಕ್ಕಮಗಳೂರು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ವಿವಿಧ ಜಾಗೃತಿ ಕಾರ್ಯಕ್ರಮ, ಕಾನೂನು ನೆರವು ಶಿಬಿರ, ಪುನರ್ವಸತಿ ಯೋಜನೆ ಹಾಗೂ ಸಾಮಾಜಿಕ ಹಕ್ಕು ಕುರಿತು ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ ಎಂದರು.
ಜೀತ ಪದ್ಧತಿಯಿಂದ ಜನರನ್ನು ಮುಕ್ತಗೊಳಿಸಿ ಅವರಿಗೆ ಸರ್ಕಾರಿ ಸೌಲಭ್ಯ, ಜೀವನೋಪಾಯ ಯೋಜನೆ ಮತ್ತು ಪುನರ್ವಸತಿ ನೆರವು ದೊರಕಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದು ವಿವರಿಸಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಭಾ ವರ್ಗಿಸ್ ಮಾತನಾಡಿ, ಮಾನವ ಕಳ್ಳಸಾಗಣೆ ಎಂದರೆ ಕೇವಲ ಮಹಿಳೆಯರು ಅಥವಾ ಮಕ್ಕಳನ್ನು ಲೈಂಗಿಕ ಶೋಷಣೆಗೆ ಬಳಸಿಕೊಳ್ಳುವುದಷ್ಟೇ ಅಲ್ಲ. ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಬಲವಂತದ ದುಡಿಮೆ, ಭಿಕ್ಷಾಟನೆ, ಗೃಹಕಾರ್ಯ, ಕಾರ್ಖಾನೆ ಕೆಲಸ, ಕೃಷಿ ಚಟುವಟಿಕೆ ಸೇರಿ ವಿವಿಧ ಶೋಷಣೆಗೆ ಬಳಸಿಕೊಳ್ಳುವುದೂ ಮಾನವ ಕಳ್ಳಸಾಗಣೆ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಜೀತ ಕಾರ್ಮಿಕ ಪದ್ಧತಿಯಿಂದ ವಿಮುಕ್ತರಾದ ಮೂರ್ತಿ, ಬದುಕಿನ ಅನುಭವ ಹಂಚಿಕೊಂಡು ಭಾವುಕರಾದರು.
ಕಾರ್ಯಾಗಾರದಲ್ಲಿ ಪತ್ರಕರ್ತರಿಗೆ ಪ್ರೊಜೆಕ್ಟರ್ ಮೂಲಕ ಜೀತ ಕಾರ್ಮಿಕ ಪದ್ಧತಿ, ಮಾನವ ಕಳ್ಳಸಾಗಣೆ ವಿಧಾನಗಳು, ಕಾನೂನು ಕ್ರಮಗಳು, ಬಾಧಿತರ ರಕ್ಷಣೆ ಮತ್ತು ಪುನರ್ವಸತಿ ಪ್ರಕ್ರಿಯೆ ಕುರಿತು ಸಮಗ್ರ ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಂ.ಹರೀಶ್, ಖಜಾಂಚಿ ಪ್ರಕಾಶ್ ಬೆಳವಾಡಿ, ವಿಕಸನ ಸಂಸ್ಥೆಯ ಯೇಸುದಾಸ್, ಚನ್ನಬಸವೇಶ್ವರ, ಗಿರೀಶ್ ಇದ್ದರು.