ಕೆ.ಎಂ.ಶಿವಲಿಂಗೇಗೌಡ. 
ಹಾಸನ

ಬಿಜೆಪಿ ಶಾಸಕರ ಪ್ರಚೋದನೆಯಿಂದ ಮಾತಿನ ಪ್ರಹಾರ

ಪ್ರಮುಖ ಮುಖ್ಯಾಂಶಗಳು

  • ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ
  • ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟನೆ
ಅರಸೀಕೆರೆ: ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕರು ಪದೇ ಪದೆ ಅಡ್ಡಿಪಡಿಸಿ, ಪ್ರಚೋದನೆ ಮಾಡಿದ್ದರಿಂದ ವಿಚಲಿತನಾಗಿ ಮಾತಿನ ಪ್ರಹಾರ ನಡೆಸಿದ್ದೇನೆಯೇ ಹೊರತು ಯಾರನ್ನೂ ನೋಯಿಸಲು ಅಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಸದನದ ವಿಡಿಯೋ ಬಿಡುಗಡೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನರೇಗಾ ಕುರಿತು ಮಾತನಾಡುವಾಗ ಬಿಜೆಪಿಯವರು ಅಡ್ಡಿ ಮಾಡಿದರು. ಸಮಾಧಾನದಿಂದ ಇದ್ದರೂ ನನ್ನ ಬಗ್ಗೆ ಅವಾಚ್ಯ ಹಾಗೂ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಅವೆಲ್ಲಾ ರೆಕಾರ್ಡ್ ಆಗಿಲ್ಲ. ನಾನು ಮಾತನಾಡಿದ್ದು ಮಾತ್ರ ರೆಕಾರ್ಡ್ ಆಗಿದೆ. ವೇದವ್ಯಾಸ ಕಾಮತ್, ಶರಣು ಸಲಗಾರ್, ಸುರೇಶ್ ಗೌಡ ಗುಂಪು ಸಾಕಷ್ಟು ತೊಂದರೆ ಕೊಟ್ಟಿತು ಎಂದು ದೂರಿದರು.
ಸದನ ಮುಗಿದ ಮೇಲೆಯೂ ಯಾಕಪ್ಪ ಹೀಗೆ ಮಾಡುತ್ತೀರಾ ಅಂದರೆ, ನಮಗೆ ಸೂಚನೆ ಇದೆ ಅಂತ ಹೇಳಿದ್ದರು. ವೇದವ್ಯಾಸ ಕಾಮತ್ ಆರ್‌ಎಸ್‌ಎಸ್ ಆಗಿದ್ದರಿಂದ ಹಾಗೆ ಕರೆದಿದ್ದೇನೆ. ನನ್ನನ್ನು ಅಂತ ಕಳ್ಳ ಇಂತ ಕಳ್ಳ ಅಂತ ಕೂಗುತ್ತಿದ್ದರು. ಅಬಕಾರಿ ಮಂತ್ರಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು. ಆದರೆ, ನಾನು ಮಾತನಾಡುವಾಗ ಎಲ್ಲರೂ ಅಡ್ಡಿಪಡಿಸಿದರು. ಅವು ರೆಕಾರ್ಡ್ ಆಗಿಲ್ಲ ಎಂದರು.
ತಪ್ಪು ಮಾಡಿದ್ದರೆ ನನ್ನ ವಿರುದ್ಧ ನಿಯಮಾವಳಿ ತಂದು ತನಿಖೆ ಮಾಡಲಿ. ಅಸಭ್ಯ ಪದಗಳನ್ನು ಉಪಯೋಗಿಸಿದ್ದರಿಂದ ಪ್ರಚೋದನೆಗೊಂಡು ಮಾತನಾಡಿದ್ದೇನೆ. ಶಾಸಕ ಶರಣು ಸಲಗಾರ್ ಪತ್ನಿ ತಹಸೀಲ್ದಾರ್ ಎಂದು ಯಾರೋ ಹೇಳಿದ್ದರು. ಅದರಿಂದಾಗಿ ನೀನು ಗೆದ್ದಿದ್ದೀಯ ಎಂದು ಹೇಳಿದ್ದೇನೆ. ಯಾವುದೇ ದುರುದ್ದೇಶದಿಂದ ಮಾತನಾಡಿಲ್ಲ. ಬಿಜೆಪಿಯವರು ನನ್ನ ಮೇಲೆ ಏಕೆ ಇಷ್ಟೊಂದು ಜಿದ್ದು ಸಾಧಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.
ಜೆಡಿಎಸ್ ಸಿಂಬಲ್‌ನಲ್ಲಿ ಗೆದ್ದು ಪಕ್ಷ ಬಿಟ್ಟು ಹೋಗಿದ್ದೇನೆಯೇ? ಹಾಗೆ ಮಾಡಿದ್ದರೆ ಮೋಸ ಮಾಡಿದ್ದೇನೆ ಅನ್ನಬಹುದಿತ್ತು. ಚುನಾವಣೆಗೆ ನಿಲ್ಲುವುದು ನನಗೆ ಬಿಟ್ಟ ವಿಚಾರ. ನನ್ನ ವಿರುದ್ಧ ಹೇಗೆ ಪ್ರಚೋದನೆ ಮಾಡಿದರು ಅನ್ನೋದು ಹೊರಗೆ ಬಂದಿಲ್ಲ. ಈ ವಿಚಾರ ರಾಜ್ಯದ ಜನತೆಗೆ ಗೊತ್ತಾಗಬೇಕು. ನನಗೆ ಸಿಕ್ಕಷ್ಟು ತುಣುಕುಗಳನ್ನು ಮಾತ್ರ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಒಂದು ಗಂಟೆ ಭಾಷಣ ಮಾಡಿದರು. ಆಗ ಕಾಂಗ್ರೆಸ್ ಬೈದರೆ ಹೊರತು ಪ್ರಿಯಾಂಕ್ ಖರ್ಗೆ ಬಗ್ಗೆ ಮಾತನಾಡಿಲ್ಲ. ಹಳ್ಳಿಭಾಷೆಯಲ್ಲಿ ಮಾತನಾಡಿದ್ದೇನೆ ಅಷ್ಟೆ. ಇಲ್ಲಿವರೆಗೂ ನಾನು ಮಾತನಾಡಿದ್ದು ಮಾತ್ರ ಬರುತಿತ್ತು. ಇದರಿಂದ ಅವರ ವರ್ತನೆ ತೋರಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.
ವಿಡಿಯೋ ವೈರಲ್‌ನಿಂದ ಮತ್ತೊಮ್ಮೆ ಮುಜುಗರ
ಸದನದಲ್ಲಿ ನಡೆದಿರುವ ಜಟಾಪಟಿ ಮುನ್ನೆಲೆಗೆ ಬಂದಿರುವ ಹೊತ್ತಿನಲ್ಲೇ ಮೂಲ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮನರೇಗಾ ಕುರಿತು ಇತ್ತೀಚೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದ ವೇಳೆ ತೋಟದ ಮನೆಯಲ್ಲಿ ಸಭೆ ಮಾಡಿದ್ದರು. ಕಾರ್ಯಕರ್ತರು ಮಾತನಾಡುತ್ತಿದ್ದ ವೇಳೆ ಪದೇ ಪದೆ ಮೈಕ್ ಕಸಿದುಕೊಂಡು ಶಿವಲಿಂಗೇಗೌಡ ರೇಗಿದ್ದಾರೆ. ಬೆಳವಣಿಗೆ ಕಂಡು ಕೋಪಗೊಂಡ ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು ಪಕ್ಷದಲ್ಲಿ ಯಾರು ಇರಲಿ, ಹೋಗಲಿ, ನಿಷ್ಠಾವಂತರು ಕಟ್ಟಿ ಬೆಳೆಸಿದ ಕಾಂಗ್ರೆಸ್ ಬಿಡಲು ನಾವು ಸಿದ್ಧರಿಲ್ಲ. ಹಾಗೆಯೇ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಲಗಾಮು ಹಾಕಲು ಹೊರಟರೆ ಸಹಿಸುವುದಿಲ್ಲ ಎಂದು ಹೇಳಿದರು.
ಅನ್ಯ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಇದೀಗ ಇಲ್ಲಿಗೆ ಬಂದಿದ್ದಾರೆ ಎಂದು ಏರುದನಿಯಲ್ಲಿ ಮಾತನಾಡಿದ್ದಾರೆ. ನಗರ ಯೋಜನಾ ಪ್ರಾಧಿಕಾರದ ಸದಸ್ಯ ಬಾಲಮುರುಗನ್, ವೆಂಕಟಮುನಿ ಮತ್ತಿತರರು ಪ್ರಶ್ನೆ ಮಾಡಿದ್ದರಿಂದ ಸಭೆಯಲ್ಲಿ ಗೊಂದಲ ಉಂಟಾಗಿದ್ದು ಮೈಕ್ ಕೈಕೊಟ್ಟಿದೆ. ಸಭೆಯ ವಿದ್ಯಮಾನಗಳ ವಿಡಿಯೋ ವೈರಲ್ ಆಗಿದ್ದು ಶಿವಲಿಂಗೇಗೌಡ ಅವರಿಗೆ ಮತ್ತೊಂದು ಮುಜುಗರ ತಂದಿಟ್ಟಿದೆ.