ಕಾರ್ಜುವಳ್ಳಿ ಹಿರೇಮಠದ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯ 47ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳಾದ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ, ಶಿವಾಚಾರ್ಯರ ಸದ್ಧೋಧನಾ ಪಾದಯಾತ್ರೆಯಲ್ಲಿ ಭಕ್ತರಿಗೆ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ವಿತರಿಸಲಾಯಿತು.
- ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಅಭಿಮತ
- ಶಿವಾಚಾರ್ಯರ ಸದ್ಧೋಧನಾ ಪಾದಯಾತ್ರೆಗೆ ಚಾಲನೆ
ಆಲೂರು: ಜಗದ್ಗುರು ರೇಣುಕರಿಂದ ಸ್ಥಾಪಿಸಲ್ಪಟ್ಟ ವೀರಶೈವ ಧರ್ಮ ಮಾನವ ಧರ್ಮಕ್ಕೆ ಜಯ ಮತ್ತು ವಿಶ್ವಕ್ಕೆ ಶಾಂತಿ ಬಯಸುವ ಆಶಯ ಹೊಂದಿದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾರ್ಜುವಳ್ಳಿ ಹಿರೇಮಠದ ಲಿಂಗೈಕ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯ 47ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳಾದ ಸದಾಶಿವ ಸ್ವಾಮೀಜಿ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ, ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಹಾಸನ(ಮಂಗಳೂರು-ಕೊಡಗು) ಜಿಲ್ಲಾ ಘಟಕಗಳು ಮತ್ತು ಕಾರ್ಜುವಳ್ಳಿ ಶ್ರೀ ಸಂಸ್ಥಾನ ಹಿರೇಮಠದ ಸಹಯೋಗದಲ್ಲಿ ಕಾರ್ಜುವಳ್ಳಿಯ ಕೂಡಿಗೆಯಿಂದ ಕಾರ್ಜವಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೂ ಶಿವಾಚಾರ್ಯರ ಸದ್ಧೋಧನಾ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ವೀರಶೈವ ಧರ್ಮದ ಪಂಚಾಚಾರ್ಯರು ಯುಗ ಪುರುಷರು. ಇವರು ತತ್ವ ಉಪದೇಶ ಬೋಧಿಸಿದರೆ, ಶರಣರು ಶತಮಾನ ಪುರುಷರು. ಈ ಇಬ್ಬರ ಧ್ಯೇಯೋದ್ದೇಶಗಳು ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಸಮೃದ್ಧಿ ತರುವುದಾಗಿದೆ. ಇಂದು ಜನರು ಆಧುನಿಕತೆಗೆ ಮಾರುಹೋದ ಹಿನ್ನೆಲೆಯಲ್ಲಿ ಅಶಾಂತಿ, ಅತೃಪ್ತಿ ತಾಂಡವವಾಡುತ್ತಿದೆ. ಅಶಾಂತಿ ತೂಲಗಿ ನೆಮ್ಮದಿಯಾಗಿ ಬದುಕು ಬೇಕಾದರೆ ಎಲ್ಲರಲ್ಲೂ ಮಾನವ ಧರ್ಮ ನೆಲೆಸಬೇಕು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಧ್ಯೇಯ ವಾಕ್ಯ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಪಾದಯಾತ್ರೆಯ ಮಾರ್ಗಮಧ್ಯೆ ಭಕ್ತರಿಗೆ ರುದ್ರಾಕ್ಷ, ವಿಭೂತಿ ಧಾರಣೆ, ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ವಿತರಣೆ ಮಾಡಲಾಯಿತು. ನಂತರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.
ಕಡೆನಂದಿಹಳ್ಳಿಯ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಚೆನ್ನವೀರ ದೇಶಿಕೇಂದ್ರ ಸ್ವಾಮೀಜಿ, ಹಾರನಹಳ್ಳಿ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಚೆನ್ನಗಿರಿ ಮಠದ ಕೇದಾರಲಿಂಗ ಶಿವ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಬಳಸಗೋಡು ಮಠದ ಗುರು ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.