ಅರಕಲಗೂಡು ತಾಲೂಕಿನಲ್ಲಿ ಭತ್ತ, ರಾಗಿ ಕಟಾವು ನಡೆಸಿ ಬಣವೆ ಹಾಕಿರುವ ರೈತರು ಮಳೆಯಿಂದ ರಕ್ಷಿಸಿಕೊಳ್ಳಲು ಪ್ಲಾಸ್ಟಿಲ್ ಹೊದಿಕೆ ಹೊದಿಸಿರುವುದು.
- ಮಳೆ ಸಿಂಚನದಿಂದ ರೈತರಿಗೆ ತೊಂದರೆ
ಅರಕಲಗೂಡು: ತಾಲೂಕಿನಲ್ಲಿ ಭಾನುವಾರ ವರುಣನ ಸಿಂಚನದಿಂದ ಭತ್ತದ ಬಣವೆ ಹಾಕಿ ಒಕ್ಕಣೆ ಕಾರ್ಯ ನಡೆಸಲು ರೈತರಿಗೆ ತೊಂದರೆ ಉಂಟಾಗಿದೆ.
ಅಗಸದಲ್ಲಿ ಮೋಡಗಳು ಆವರಿಸಿದ್ದು, ಬೆಳಗ್ಗೆಯಿಂದಲೇ ಬಿಟ್ಟು ಬಿಟ್ಟು ಮಳೆ ಉದುರುತ್ತಿರುವುದು ರೈತರಿಗೆ ತಲೆನೋವಾಗಿದೆ.
ಮಲ್ಲಿಪಟ್ಟಣ ಹೋಬಳಿ, ದೊಡ್ಡಬೆಮ್ಮತ್ತಿ ಭಾಗದಲ್ಲಿ ಈಗಾಗಲೆ ಭತ್ತದ ಕಟಾವು ನಡೆಸಿ ಬಣವೆ ಹಾಕಿರುವ ರೈತರು ಒಕ್ಕಣೆ ಕಾರ್ಯ ಕೈಗೊಂಡಿದ್ದಾರೆ. ದೊಡ್ಡಮಗ್ಗೆ, ಕೊಣನೂರು, ರಾಮನಾಥಪುರ ಹೋಬಳಿ ಭಾಗದಲ್ಲಿ ಕಟಾವು ಕಾರ್ಯ ಮುಕ್ತಾಯದ ಹಂತ ತಲುಪಿದೆ. ಕೆಲವು ಕಡೆ ಬಣವೆ ಹಾಕಿ ಒಕ್ಕಣೆ ನಡೆಸಲು ಮುಂದಾಗಿದ್ದ ರೈತರಿಗೆ ಇದ್ದಕ್ಕಿದ್ದಂತೆ ಅಕಾಲಿಕವಾಗಿ ಬೀಳುತ್ತಿರುವ ಮಳೆ ಬೆಚ್ಚಿ ಬೀಳಿಸಿದೆ.
ರಾಜಮುಡಿ, ರಾಜಭೋಗ ತಳಿಯ ಭತ್ತದ ಬೆಳೆಗೆ ಹೆಸರಾದ ಕಟ್ಟೇಪುರ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿ ಹಾಗೂ ಹೇಮಾವತಿ ಮತ್ತು ಹಾರಂಗಿ ನಾಲಾ ಅಚ್ಚುಕಟ್ಟಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ಕಟಾವು ಮಾಡಿ ಒಕ್ಕಣೆ ಸಮಯದಲ್ಲಿ ಮಳೆ ಸುರಿದರೆ ಭತ್ತದ ಫಸಲು ಕರಗಿ ಹುಲ್ಲು ಹಾಳಾಗಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಅಪಾರ ನಷ್ಟ ಅನುಭವಸಬೇಕಾಗುತ್ತದೆ ಎಂದು ಅನ್ನದಾತರು ಅಳಲು ತೋಡಿಕೊಂಡಿದ್ದಾರೆ.