ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ರೋಟರ‌್ಯಾಕ್ಟ್ ಕ್ಲಬ್ ವತಿಯಿಂದ ಆಟೋ ಎಕ್ಸ್‌ಪೋವನ್ನು ಇತ್ತೀಚೆಗೆ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಯಿತು. ವಿವಿಧ ನೂತನ ಮಾದರಿಯ ಕಾರುಗಳು ಮತ್ತು ಬೈಕ್‌ಗಳ ಆಟೋ ಶೋ ಪ್ರೇಕ್ಷಕರನ್ನು ಗಮನಸೆಳೆಯಿತು. 
ಹಾಸನ

ವಿವಿಧ ಮಾದರಿಯ ಆಟೋ ಎಕ್ಸ್‌ಪೋ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ವಿವಿಧ ಮಾದರಿಯ ಆಟೋ ಎಕ್ಸ್‌ಪೋ
  • ಕಾರು, ಬೈಕ್, ಆಟೋ ಶೋ ಆಕರ್ಷಣೆ
ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ರೋಟರ‌್ಯಾಕ್ಟ್ ಕ್ಲಬ್ ವತಿಯಿಂದ ಇತ್ತೀಚೆಗೆ ಕಾಲೇಜು ಮೈದಾನದಲ್ಲಿ ಆಟೋ ಎಕ್ಸ್‌ಪೋ ಆಯೋಜಿಸಲಾಗಿತ್ತು.
ವಿವಿಧ ನೂತನ ಮಾದರಿಯ ಕಾರುಗಳು ಮತ್ತು ಬೈಕ್, ಆಟೋ ಶೋನ ಮುಖ್ಯ ಆಕರ್ಷಣೆಯಾಗಿತ್ತು. ಕೆಲ ಕಾರುಗಳು ಹಿಂಬದಿ ಸೈಲೆನ್ಸರ್‌ನಿಂದ ಬೆಂಕಿ ಉಗುಳುತ್ತಾ ವೇಗವಾಗಿ ಚಲಿಸಿ ರೋಮಾಂಚನ ಮೂಡಿಸಿದವು. ಬಿರುಸಿನ ಎಂಟ್ರಿ ನೀಡಿದ ವಾಹನಗಳು ಧೂಳು ಎಬ್ಬಿಸುತ್ತಾ ಸುತ್ತು ಹಾಕಿದ ದೃಶ್ಯಗಳು ನೋಡಲು ವಿಶೇಷ ಅನುಭವ ನೀಡಿದವು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಟಿ.ದ್ಯಾವೇಗೌಡ ಮಾತನಾಡಿ, ಹಿಂದಿನ ದಿನಗಳಲ್ಲಿ ಅಂಬಾಸಿಡರ್‌ಗಳಂತಹ ಕೆಲವೇ ಕಾರುಗಳನ್ನು ನೋಡುತ್ತಿದ್ದೆವು. ಆದರೆ ಕಾಲ ಬದಲಾಗುತ್ತಿದ್ದಂತೆ ನೂತನ ತಂತ್ರಜ್ಞ್ಞಾನದಿಂದ ಅನೇಕ ಮಾದರಿಯ ಕಾರುಗಳು ಮತ್ತು ಬೈಕ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಗ್ರಾಹಕರು ಹೊಸ ಮಾದರಿಯ ವಾಹನಗಳನ್ನು ಖರೀದಿಸಿ ಸಂತೋಷ ಪಡುತ್ತಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಮಾತನಾಡಿ, ಹೊಸ ಕಾರುಗಳ ಘರ್ಜನೆ ಹಾಗೂ ಪ್ರದರ್ಶನ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದೆ. ವಿಜ್ಞಾನ ಮತ್ತು ತಾಂತ್ರಿಕತೆ ಬೆಳೆಯುತ್ತಿದ್ದಂತೆ ಹೊಸ ಆವಿಷ್ಕಾರಗಳ ಮೂಲಕ ತಯಾರಾದ ವಾಹನಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ ಎಂದು ಹೇಳಿದರು.
ವಿವಿಧ ಕಾರು ಮತ್ತು ಬೈಕ್ ಶೋ ರೂಮ್‌ಗಳು ತಮ್ಮ ವಾಹನಗಳನ್ನು ಪ್ರದರ್ಶನಕ್ಕೆ ಇಟ್ಟು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ನಾಗರಾಜ್ ಜೈನ್, ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಇನ್‌ಚಾರ್ಜ್ ಪ್ರಾಂಶುಪಾಲ ಡಾ.ರಾಜಣ್ಣ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಇಂದ್ರ ಬಹಾದ್ದೂರು, ಸಹ ಅಧಿಕಾರಿ ಡಾ. ಶಿವಶಂಕರ್ ಹಾಗೂ ರೋಟರ‌್ಯಾಕ್ಟ್ ಕ್ಲಬ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.