ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಿಸಿ ಕೆ.ಎಸ್.ಲತಾಕುಮಾರಿ, ಕಣಗಾಲ್ ಮೂರ್ತಿ, ಎಚ್.ಬಿ.ಮದನಗೌಡ, ಜೆ.ಆರ್. ಕೆಂಚೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್, ಪ್ರಕಾಶ್, ಮಧುಸೂದನ್ ಇತರರಿದ್ದರು.
- ಸಿರಿಧಾನ್ಯ, ಸಾವಯವ ಆಹಾರಗಳನ್ನೇ ಬಳಸಿ
- ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸಲಹೆ
- ಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ
ಹಾಸನ: ಇಂದಿನ ಆಹಾರ ಪದ್ಧತಿ, ವಿಷಾಹಾರ ಸೇವನೆಯಿಂದಾಗಿ ಮಾನವನ ಆರೋಗ್ಯ ಅಪಾಯದಲ್ಲಿದೆ. ಇದಕ್ಕೆ ಪರಿಹಾರಕ್ಕಾಗಿ ಸಿರಿಧಾನ್ಯ ಹಾಗೂ ಸಾವಯವ ಆಹಾರಗಳತ್ತ ಎಲ್ಲರೂ ಮುಖ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಜನರಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಮಹತ್ವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣ ಆವರಣದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಂಡೆ ಬಾರಿಸಿ, ಬಲೂನು ಹಾರಿಸಿ, ಹಸಿರು ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರೈತರ ಋಣ ನೆನಪು ಮಾಡುತ್ತಾ, ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಸಿರಿಧಾನ್ಯ ಕಡೆಗೆ ಗಮನಹರಿಸಬೇಕಿದೆ. ವ್ಯವಸಾಯ ಇಂದು ಉದ್ಯಮವಾಗಿದೆ. ಹಾಗೆಯೇ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕೊಡಬೇಕಿದೆ. ಆಗ ಆರೋಗ್ಯಕರ ಜೀವನ ತಮ್ಮದಾಗಲಿ ಎಂದರು.
ಆರೋಗ್ಯಕರ ಜೀವನದ ಮೂಲ ಸಿರಿಧಾನ್ಯ ಮತ್ತು ಸಾವಯವ ಆಹಾರದಲ್ಲೇ ಇದೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸೇರಿ ಹಲವು ಗಂಭೀರ ಕಾಯಿಲೆಗಳು ಹೆಚ್ಚುತ್ತಿರುವುದು ಆಹಾರದಲ್ಲಿರುವ ರಾಸಾಯನಿಕಗಳು ಹಾಗೂ ವಿಷಕಾರಿ ಅಂಶಗಳಿಂದ. ಇದರಿಂದ ಹೊರಬರಲು ಜನರು ಸಹಜ, ಶುದ್ಧ ಆಹಾರ ಸೇವಿಸಬೇಕು ಎಂದರು.
ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಅತ್ಯವಶ್ಯ. ಸರ್ಕಾರ ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕ ಸಾವಯವ ಉತ್ಪನ್ನಗಳನ್ನು ಬಳಸುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು. ಇದರಿಂದ ರೈತರ ಬದುಕು ಸುಧಾರಿಸುವುದರ ಜತೆಗೆ ಸಾರ್ವಜನಿಕರ ಆರೋಗ್ಯವೂ ಉತ್ತಮವಾಗುತ್ತದೆ ಎಂದು ಹೇಳಿದರು.
ನಂತರ ಡಿಸಿ ಅವರು ಎತ್ತಿನಗಾಡಿಯಲ್ಲಿ ಕುಳಿತು ಸಾಗುವ ಮೂಲಕ ಸಾಂಪ್ರದಾಯಿಕ ಕೃಷಿ ಸಂಸ್ಕೃತಿಗೆ ಗೌರವ ಸಲ್ಲಿಸಿದರು. ಇದು ರೈತರು ಹಾಗೂ ಸಾರ್ವಜನಿಕರಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ಕಣಗಾಲ್ ಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ.ಮದನಗೌಡ, ಜಿಲ್ಲಾ ಅಧ್ಯಕ್ಷ ಜೆ.ಆರ್. ಕೆಂಚೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್, ಸಕಲೇಶಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್, ಯುವಜನ-ಕ್ರೀಡಾ ಇಲಾಖೆ ಅಧಿಕಾರಿಗಳು, ಹಾಸನ ಆಕಾಶವಾಣಿಯ ಮಧುಸೂದನ್ ಸೇರಿದಂತೆ ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಸಿರಿಧಾನ್ಯ ಅರಿವು ಜಾಥಾವು ಸಾಲಗಾಮೆ ರಸ್ತೆಯ ಮೂಲಕ ಮಹಾರಾಜ ಪಾರ್ಕ್, ಹೇಮಾವತಿ ಪ್ರತಿಮೆ ಮುಂಭಾಗದವರೆಗೆ ಸಾಗಿ ಕೊನೆಗೊಂಡಿತು.ಬಿಳಿ ಬಣ್ಣದ ಟಿ ಶರ್ಟ್ ತೊಟ್ಟು ನೂರಾರು ಮಂದಿ ಭಾಗಿಯಾಗಿದ್ದರು.