ಸಕಲೇಶಪುರ: ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದರೆ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುವುದು ಅತ್ಯಗತ್ಯ ಎಂದು ಪೊಲೀಸ್ ಇಲಾಖೆಯ ಕೀರ್ತಿ ಸ್ವರೂಪ್ ತಿಳಿಸಿದರು. 
ಹಾಸನ

ಕ್ರೀಡಾ ಚಟುವಟಿಕೆಗಳಿಂದ ಪ್ರತಿಭೆ ಅನಾವರಣ

ಪ್ರಮುಖ ಮುಖ್ಯಾಂಶಗಳು

  • sports activities
ಸಕಲೇಶಪುರ: ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದರೆ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುವುದು ಅತ್ಯಗತ್ಯ ಎಂದು ಪೊಲೀಸ್ ಇಲಾಖೆಯ ಕೀರ್ತಿ ಸ್ವರೂಪ್ ತಿಳಿಸಿದರು.
ಪಟ್ಟಣದ ಸುಭಾಷ್ ಮೈದಾನದಲ್ಲಿ ಎಸ್‌ಕೆಪಿ 4 ಸ್ಟಾರ್ಸ್ ಸಂಸ್ಥೆಯು ಹಮ್ಮಿಕೊಂಡಿದ್ದ ಬೇಸಿಗೆ ಕ್ರೀಡಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಇನ್ನೂ ಸಂಪೂರ್ಣವಾಗಿ ಕ್ರೀಡಾ ಚಟುವಟಿಕೆಗಳು ರೂಪುಗೊಂಡಿಲ್ಲ. ಇಲ್ಲಿ ಸೂಕ್ತ ಕ್ರೀಡಾ ತರಬೇತಿ ವ್ಯವಸ್ಥೆ ಸ್ಥಾಪನೆಯಾಗಬೇಕಿದೆ. ಈಗಾಗಲೇ ನಾಲ್ವರು ಕೋಚ್‌ಗಳು ಹಾಗೂ ಇಬ್ಬರು ಶಿಕ್ಷಕರನ್ನು ನಿಯೋಜಿಸಿರುವುದು ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಉತ್ತಮ ಆರಂಭವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಲೂಕು ಮಟ್ಟದ ಕ್ರೀಡಾ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಮಕ್ಕಳಿಗೆ ನಿರಂತರ ತರಬೇತಿ ಪಡೆಯಲು ಸವಾಲುಗಳು ಎದುರಾಗುತ್ತಿವೆ. ವಿಶೇಷವಾಗಿ ಸಕಲೇಶಪುರ ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಳೆಗಾಲದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಿಗೆ ಕ್ರೀಡೆಯತ್ತ ಆಸಕ್ತಿ ಮೂಡಿಸಲು ಮತ್ತು ಶಿಸ್ತು, ಕೌಶಲ ಹಾಗೂ ತಂಡ ಮನೋಭಾವ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಲಿವೆ ಎಂದರು.
ಆಕ್ಸ್‌ಫರ್ಡ್ ಶಾಲೆಯ ದೈಹಿಕ ಶಿಕ್ಷಕ ಹಾಗೂ ತರಬೇತುದಾರ ಮಂಜುನಾಥ್ ಮಾತನಾಡಿ, ಮಲೆನಾಡು ಭಾಗದಲ್ಲಿ ವರ್ಷದ ಹೆಚ್ಚಿನ ತಿಂಗಳು ಮಳೆ ಇರುವುದರಿಂದ ಹೊರಾಂಗಣ ಕ್ರೀಡೆಗಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ವೇದಿಕೆ ಕಲ್ಪಿಸಲು ಈ ಶಿಬಿರ ಆಯೋಜಿಸಲಾಗಿದೆ. ಶಿಬಿರಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 5ನೇ ತರಗತಿಯಿಂದ ಪಿಯುಸಿ ವರೆಗಿನ ಯಾವುದೇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಮಕ್ಕಳನ್ನು ಪರಿಪೂರ್ಣ ಆಟಗಾರರನ್ನಾಗಿ ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತರಬೇತುದಾರರಾದ ಸಂತ ಜೋಸೆಫ್ ಶಾಲೆಯ ರಮೇಶ್, ರೋಟರಿ ಶಾಲೆಯ ಸೋಮಶೇಖರ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.