ಹಾಸನ ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದಿಂದ ಹಮ್ಮಿಕೊಂಡಿದ್ದ ದ್ವಿತೀಯ ಜಿಲ್ಲಾ ಬ್ರಾಹ್ಮಣ ಸಮ್ಮೇಳನ ಹಾಗೂ ವಿಶ್ವ ಹಿತ ಚಿಂತಕರ ಸಮಾವೇಶದಲ್ಲಿ ಚಲನಚಿತ್ರ, ರಂಗಭೂಮಿಗೆ ವಿಪ್ರರ ಕೊಡುಗೆ ಮತ್ತು ಭವಿಷ್ಯತ್ತಿನಲ್ಲಿ ಅವಕಾಶಗಳು ವಿಚಾರಗೋಷ್ಠಿ ನಡೆಯಿತು. ಎನ್.ಎಸ್.ಶ್ರೀಧರಮೂರ್ತಿ, ನಟ ಕಿರಣ್ ವಟಿ, ಎಂ.ಕೆ. ರಮೇಶ್, ಎಸ್.ರವಿಕುಮಾರ್ ಇತರರಿದ್ದರು. 
ಹಾಸನ

ಸಿನಿಮಾ ರಂಗದಲ್ಲಿ ದಾಖಲಾಗದ ಬ್ರಾಹ್ಮಣರ ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ರಂಗದಲ್ಲಿ ದಾಖಲಾಗದ ಬ್ರಾಹ್ಮಣರ ಕೊಡುಗೆ
  • ವಿಮರ್ಶಕ ಎನ್.ಎಸ್.ಶ್ರೀಧರಮೂರ್ತಿ ಅಭಿಪ್ರಾಯ
  • ವಿಶ್ವ ಹಿತ ಚಿಂತಕರ ಸಮಾವೇಶ
ಹಾಸನ: ಸಿನಿಮಾ ರಂಗದಲ್ಲಿ ಬ್ರಾಹ್ಮಣರ ಕೊಡುಗೆಗಳು ಸರಿಯಾಗಿ ದಾಖಲಾಗದೆ ಇತಿಹಾಸದ ಪುಟಗಳಿಂದ ಮರೆಯಾಗುತ್ತಿವೆ ಎಂದು ಚಲನಚಿತ್ರ ವಿಮರ್ಶಕ ಎನ್.ಎಸ್.ಶ್ರೀಧರಮೂರ್ತಿ ಅಭಿಪ್ರಾಯಪಟ್ಟರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದಿಂದ ಹಮ್ಮಿಕೊಂಡಿದ್ದ ದ್ವಿತೀಯ ಜಿಲ್ಲಾ ಬ್ರಾಹ್ಮಣ ಸಮ್ಮೇಳನ ಹಾಗೂ ವಿಶ್ವ ಹಿತ ಚಿಂತಕರ ಸಮಾವೇಶದಲ್ಲಿ ಭಾನುವಾರ ಚಲನಚಿತ್ರ, ರಂಗಭೂಮಿಗೆ ವಿಪ್ರರ ಕೊಡುಗೆ ಮತ್ತು ಭವಿಷ್ಯತ್ತಿನಲ್ಲಿ ಅವಕಾಶಗಳ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಕನ್ನಡದ ಮೊದಲ ವಾಕ್‌ಚಿತ್ರ ‘ಸತಿ ಸುಲೋಚನಾ’ ನಿರ್ಮಾಣಕ್ಕೆ ನಾಗೇಂದ್ರ ರಾವ್ ಅಡಿಪಾಯ ಹಾಕಿದರು. 1930ರ ದಶಕದಲ್ಲಿ ಬಾಲಿವುಡ್ ಪ್ರವರ್ಧಮಾನದಲ್ಲಿತ್ತಾದರೂ ಕನ್ನಡ ಸಿನಿಮಾ ರಂಗಕ್ಕೆ ಮಾರುಕಟ್ಟೆ ಇಲ್ಲದ್ದರಿಂದ ಸ್ಥಳೀಯವಾಗಿ ಯಾವ ಚಿತ್ರಗಳು ಸೆಟ್ಟೇರುತ್ತಿರಲಿಲ್ಲ. ನಾಗೇಂದ್ರ ರಾವ್ ಅವರು ಹಿಂದಿ ಚಲನಚಿತ್ರಗಳಲ್ಲಿ ಭರವಸೆಯ ಖಳನಟನಾಗಿ ಖ್ಯಾತಿ ಗಳಿಸಿದ್ದರು. ಕನ್ನಡದವರಾಗಿದ್ದ ಅವರಿಗೆ ಮಾತೃಭಾಷೆಯಲ್ಲಿ ಸಿನಿಮಾ ಮಾಡಬೇಕೆಂಬ ಆಸೆ ಹುಟ್ಟಿತ್ತು. ಆದರೆ ಬಂಡವಾಳ ಹೂಡಲು ಯಾರೂ ಮುಂದೆ ಬರಲಿಲ್ಲ. ಮುಂಬೈಯಿಂದ ನೇರವಾಗಿ ಮೈಸೂರು ಅರಮನೆಗೆ ಬಂದ ಅವರು ಮಹಾರಾಜರ ಬಳಿ ಹಣ ಸಂಗ್ರಹಿಸಿದರು. ನಂತರ ಕುಪ್ಪಳ್ಳಿ ರೇಷ್ಮೆ ವ್ಯಾಪಾರಿಗಳಿಂದ ಆರ್ಥಿಕ ಸಹಾಯ ಪಡೆದರು, ಸೇಲಂನ ಎಣ್ಣೆ ವ್ಯಾಪಾರಿಗಳ ಬಳಿಯೂ ಅಂಗಲಾಚಿದರು. ಕನ್ನಡದಲ್ಲಿ ಸಿನಿಮಾ ಮಾಡಲೇಬೇಕೆಂದು ಅವರಿವರ ಬಳಿ ಸಂಗ್ರಹಿಸಿದ ಒಟ್ಟು ಹಣ 15 ಸಾವಿರ ರೂ. ಆಗಿತ್ತು. ಅಷ್ಟು ಕಡಿಮೆ ಹಣಕ್ಕೆ ಸಿನಿಮಾ ಆಗುವುದಿಲ್ಲವೆನ್ನುವುದು ಗೊತ್ತಾದಾಗ ಚಮ್ಮನ್ ಲಾಲ್ ಡುಂಗಾರೆ ಅವರು 25 ಸಾವಿರ ರೂ. ಬಂಡವಾಳ ಹೂಡಿ ಕನ್ನಡದ ಮೊದಲ ವಾಕ್‌ಚಿತ್ರ ನಿರ್ಮಿಸಿದರು. ಆದರೆ ಸಿನಿಮಾ ನಿರ್ಮಾಪಕರ ಪಟ್ಟಿಯಲ್ಲಿ ನಾಗೇಂದ್ರ ರಾವ್‌ಗೆ ಸ್ಥಾನ ಸಿಗಲೇ ಇಲ್ಲ. ಹೀಗೆ ಅನೇಕ ಕಡೆಗಳಲ್ಲಿ ಚಲನಚಿತ್ರ ರಂಗದಲ್ಲಿ ಬ್ರಾಹ್ಮಣರನ್ನು ಮೂಲೆಗೆ ತಳ್ಳಿದ್ದಾರೆ. ಎಷ್ಟೋ ಮೊದಲುಗಳಿಗೆ ಬ್ರಾಹ್ಮಣರೇ ಕಾರಣರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬ್ರಾಹ್ಮಣರದ್ದು ಬರೆದ ಇತಿಹಾಸ ಹಾಗೂ ಬರೆಯದೆ ಉಳಿದ ಇತಿಹಾಸ ಸಾಕಷ್ಟಿದೆ ಎಂದು ವಿಶ್ಲೇಷಿಸಿದರು.
1945ರಲ್ಲೇ ಕನ್ನಡದ ಮೊದಲ ಆರ್ಕೆಸ್ಟ್ರಾ ತಂಡವನ್ನು ಕಟ್ಟಿದವರು ಸಹ ಬ್ರಾಹ್ಮಣರೇ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಚಿತ್ರರಂಗದ ಸಾಹಿತ್ಯ ಲೋಕದ ತ್ರಿಮೂರ್ತಿಗಳಾದ ಚಿ.ಉದಯಶಂಕರ್, ವಿಜಯನರಸಿಂಹ ಹಾಗೂ ಆರ್.ಎನ್. ಜಯಗೋಪಾಲ್ ಮತ್ತು ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ಕೊಡುಗೆ ಅಪಾರವಾಗಿದೆ. ಗಾಯನ ದಿಗ್ಗಜರಾದ ಪಿ.ಬಿ. ಶ್ರೀನಿವಾಸ್ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸಂಗೀತ ನಿರ್ದೇಶಕರಾದ ಎಂ.ರಂಗರಾವ್ ಮತ್ತು ಉಪೇಂದ್ರ ಕುಮಾರ್ ಅವರು ನಮ್ಮ ಸಮುದಾಯದವರೇ ಎಂಬುದು ಹೆಮ್ಮೆಯ ವಿಷಯವೆಂದರು.
ಚಿ. ಉದಯಶಂಕರ್ ಅವರು ಪರಮ ದತ್ತಾತ್ರೇಯ ಭಕ್ತರಾಗಿದ್ದು, ಯಾವುದೇ ಗೀತೆ ಬರೆಯುವ ಮೊದಲು ದತ್ತಾತ್ರೇಯ ಪ್ರಾರ್ಥನೆ ಮಾಡುತ್ತಿದ್ದರು ಎಂಬ ಶ್ರದ್ಧೆಯ ಸಂಗತಿಯನ್ನು ವಿವರಿಸಿದರು. ನಿರ್ದೇಶನ ವಿಭಾಗದಲ್ಲಿ ಹುಣಸೂರು ಕೃಷ್ಣಮೂರ್ತಿ ಅವರು ಬಬ್ರುವಾಹನ ಮತ್ತು ಸತ್ಯಹರಿಶ್ಚಂದ್ರದಂತಹ ಮೇರು ಚಿತ್ರಗಳ ಮೂಲಕ ಅಮರರಾಗಿದ್ದಾರೆ. ಚಿತ್ರರಂಗದಲ್ಲಿರುವ ಬ್ರಾಹ್ಮಣರನ್ನು ಬ್ರಾಹ್ಮಣತ್ವದ ಮೌಲ್ಯಗಳನ್ನು ಉಳಿಸಿಕೊಂಡವರು ಮತ್ತು ಕೇವಲ ಹುಟ್ಟಿನಿಂದ ಬ್ರಾಹ್ಮಣರಾದವರು ಎಂದು ಎರಡು ವರ್ಗಗಳಲ್ಲಿ ವಿಶ್ಲೇಷಿಸಿ, ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಕಿರುತೆರೆ ನಿರ್ಮಾಪಕ ಹಾಗು ನಟ ಕಿರಣ್ ವಟಿ ಅವರು ಮಾತನಾಡಿ, ರಂಗಭೂಮಿ, ಸಿನಿಮಾ ಹಾಗು ಧಾರಾವಾಹಿ ಕ್ಷೇತ್ರಗಳಲ್ಲಿ ಕೆಲಸ ಮಾಡುವಾಗ ನಮ್ಮ ಸಮುದಾಯದವರೇ ಶೇ. 70ರಷ್ಟು ಜನ ಇರುತ್ತಾರೆ. ಆದರೆ, ಉಳಿದ ಶೇ.30ರಷ್ಟು ಜನರ ಹೆಸರು ಮಾತ್ರ ಮುನ್ನೆಲೆಗೆ ಬರುತ್ತದೆ. ಬ್ರಾಹ್ಮಣರು ಸದಾ ಇನ್ನೊಬ್ಬರ ಸಂತೋಷಕ್ಕಾಗಿ ಹಾಗೂ ಹೆಸರಿಗಿಂತ ಹೆಚ್ಚಾಗಿ ಕಲೆಯ ಮೇಲಿನ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಎಂ.ಕೆ. ರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಅರಸೀಕೆರೆ ಬ್ರಾಹ್ಮಣ ಸಭಾ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಬ್ರಾಹ್ಮಣ ಸಭಾ ಉಪಾಧ್ಯಕ್ಷ ಎಂ.ಕೆ.ರಮೇಶ್ ಇದ್ದರು.