ಆಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಂ.ಕೆ.ಪ್ರಾಣೇಶ್, ಎ.ಟಿ. ರಾಮಸ್ವಾಮಿ, ಸಿ.ಎಸ್.ಪುಟ್ಟೇಗೌಡ, ಬಿ.ಎ.ಪರಮೇಶ್, ಬಾಗೂರು ಮಂಜೇಗೌಡ, ಎ.ಜೆ.ಕೃಷ್ಣೇಗೌಡ ಇದ್ದರು.  
ಹಾಸನ

ಸಮಾಜಮುಖಿ ಕೆಲಸ ಮಾಡಲು ಒಗ್ಗಟ್ಟು ಅತ್ಯಗತ್ಯ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ.ಪ್ರಾಣೇಶ್
  • ಆಲೂರು ರಾಧಮ್ಮ ಜನಸ್ಪಂದನ ವೇದಿಕೆ
ಆಲೂರು: ಬದುಕಿನ ಗುರಿ ತಲುಪಲು ಸಮಯ ಪ್ರಜ್ಞೆ ಮತ್ತು ನೈತಿಕತೆ ಅತ್ಯಗತ್ಯ ಎಂದು ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಆಲೂರು ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಆಯೋಜಿಸಿದ್ದ ಐದನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ಒಗ್ಗಟ್ಟಿದ್ದಾಗ ಸಮಾಜಮುಖಿ ಕೆಲಸ ಮಾಡಬಹುದು ಎಂದರು.
ಹೇಮಂತ್ ಕುಮಾರ್ ತಮ್ಮ ತಾಯಿ ದಿ.ರಾಧಮ್ಮ ಹೆಸರಿನಲ್ಲಿ ಸಾಮಾಜಿಕ ಕಾರ್ಯ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಪ್ರಸ್ತುತ ದಿನಮಾನಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಇಂತಹ ಕೆಲಸ ಮಾಡುವವರು ವಿರಳ. ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಜನೋಪಯೋಗಿ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ ಎಂದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸದಿದ್ದರೆ ಬದುಕಿನ ತಾಳ, ಮೇಳ ತಪ್ಪುತ್ತದೆ ಎಂದರು.
ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಕೂಡು ಕುಟುಂಬ ವಿಭಜನೆಯಾಗುತ್ತಿದ್ದು, ಮನುಷ್ಯ ರಾತ್ರೋರಾತ್ರಿ ಶ್ರೀಮಂತನಾಗಬೇಕೆಂಬ ಧಾವಂತದಲ್ಲಿದ್ದಾನೆ. ಮಕ್ಕಳನ್ನು ವೈದ್ಯರು, ಇಂಜಿನಿಯರ್ ಮಾಡಬೇಕೆಂಬ ಚಿಂತನೆ ಹೊರತಾಗಿ, ಸುಸಂಸ್ಕೃತ ಮಕ್ಕಳನ್ನಾಗಿ ಮಾಡಬೇಕು ಎಂಬ ಚಿಂತನೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಬಾಗೂರು ಮಂಜೇಗೌಡ ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಬೇಕು. ವಿದೇಶಿ ವ್ಯಾಮೋಹದಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು.
ಜಿಪಂ ನಿವೃತ್ತ ಸಿಇಒ ಬಿ. ಎ.ಪರಮೇಶ್ ಮಾತನಾಡಿದರು. ಆರೋಗ್ಯ ರಕ್ಷಾ ಸದಸ್ಯತ್ವಕ್ಕೆ ಬೇಲೂರು ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿ ಮಾತನಾಡಿದರು. ರಾಧಮ್ಮ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಹೇಮಂತಕುಮಾರ್, ವಕೀಲ ವಿಜಯಕುಮಾರ್, ಡಾ.ಸಾವಿತ್ರಿ, ಡಾ.ಪ್ರೇಮಲತಾ, ಜಿ.ಪ್ರಕಾಶ್, ಕಸಬಾ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ಪಿ.ಮೋಹನ್, ಕಾರ್ಯದರ್ಶಿ ಸಿ.ಸೋಮಶೇಖರ್ರ್, ಕೆ.ಎಂ.ಸಾಗರ್ ಇತರರಿದ್ದರು.