ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟ್ರೀಯ ಶಾಲೆಯ ವತಿಯಿಂದ ನಡೆದ ಟೈಮ್ಸ್ ಸಂಭ್ರಮ ಶಾಲಾ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಂ.ಸಿ.ರಂಗಸ್ವಾಮಿ, ಬಿ.ಕೆ. ಗಂಗಾಧರ, ಶ್ರೀನಿವಾಸ್, ಲೋಕೇಶ್, ಬ್ಲೆಸ್ಸಿ ಶ್ಯಾಮ್, ಕಾವ್ಯಶ್ರೀ, ನಳಿನಾಕ್ಷಿ, ಅರ್ಜುನ್ ಇತರಿದ್ದರು.
ಹಾಸನ: ಪಾಲಕರು ತಮ್ಮ ಮಕ್ಕಳ ಮನಸ್ಥಿತಿಯನ್ನು ಅರಿಯುವುದರ ಜತೆಗೆ ಅವರು ಯಾವ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುವುದನ್ನು ಅರಿತು, ಸಹಕಾರ ನೀಡಿದರೆ ಪ್ರತಿಯೊಂದು ಮಗುವು ಜೀವನದಲ್ಲಿ ಸಾಧನೆ ಮಾಡಲು ಸಹಕಾರವಾಗಲಿದೆ ಎಂದು ಪ್ರಗತಿಪರ ಕೃಷಿಕ ಹಾಗೂ 2025ರ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಸಿ.ರಂಗಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆಯ ವತಿಯಿಂದ ನಡೆದ ಟೈಮ್ಸ್ ಸಂಭ್ರಮ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಪಾಲಕರ ಆಸೆ ಆಕಾಂಕ್ಷೆಗಾಗಿ ಮಕ್ಕಳ ಮೇಲೆ ಒತ್ತಡ ಹೇರುವ ಮೂಲಕ ಮಕ್ಕಳ ಆಕಾಂಕ್ಷೆಗಳನ್ನು ಕಡೆಗಣಿಸುತ್ತಿದ್ದೇವೆ. ಮಕ್ಕಳನ್ನು ಆರಂಭದಲ್ಲಿ ಉತ್ತಮ ಸಂಸ್ಕೃತಿಯನ್ನು ಕಲಿಸುವ ಮೂಲಕ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ನಂತರ ಮಕ್ಕಳು ದೊಡ್ಡವರಾಗುತ್ತಾ ಅವರಲ್ಲಿ ಯಾವ ಕ್ಷೇತ್ರದ ಮೇಲೆ ಆಸಕ್ತಿ ಇರುತ್ತದೆಯೊ ಆ ಕ್ಷೇತ್ರದ ಕಡೆಗೆ ಅವರನ್ನು ಬೆಳೆಯಲು ಸಹಕಾರ ನೀಡಬೇಕು. ಹಾಗಾದಾಗ ಮಾತ್ರ ಯಾವುದೇ ಒಬ್ಬ ಮಗು ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ ಸಮಾಜದಲ್ಲಿ ಇದು ಆಗದೆ ಇರುವುದರಿಂದ ಇಂದು ಅನೇಕ ಯುವಕರು ನಿರುದ್ಯೋಗಿಗಳಾಗಿ ಉಳಿಯುತ್ತಿದ್ದಾರೆ ಎಂದರು.
ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಆ ಕ್ಷೇತ್ರದಲ್ಲಿ ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದರೆ ಸಾಧನೆ ಮಾಡಲು ಸಾಧ್ಯ. ಯುವಕರು ಈ ದೇಶದ ಆಸ್ತಿ. ಅವರನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬ ಹಿರಿಯರ ಮೇಲಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಮಾನವೀಯ ಗುಣಗಳನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ. ಗುರು ಹಿರಿಯರನ್ನು ಮಕ್ಕಳು ಗೌರವದಿಂದ ಕಾಣುವ ಗುಣಗಳು, ದೇಶಕ್ಕಾಗಿ ದುಡಿಯುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಹೇಳಿದರು.
ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ ಮಾತನಾಡಿ, ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿ ಬದುಕುತ್ತಿರುವ ವ್ಯಕ್ತಿಗಳನ್ನು ಕರೆತಂದು ಅವರಿಂದ ಮಕ್ಕಳಿಗೆ ಹಿತವಚನಗಳನ್ನು ತಿಳಿಸಿಕೊಡಬೇಕು. ಮಕ್ಕಳಿಗೆ ಪಠ್ಯ ಬೋಧನೆಯಿಂದ ಏನನ್ನು ಕಲಿಸಲು ಸಾಧ್ಯವಿಲ್ಲ, ಹಾಗಾಗಿ ಶಾಲಾ ಹಂತದಲ್ಲಿ ಮಕ್ಕಳಿಗೆ ಗುರು ಹಿರಿಯರನ್ನು ಗೌರವಿಸುವಂತಹ ಕಾರ್ಯಕ್ರಮ, ಕೃಷಿ ಬದುಕು ಸೇರಿದಂತೆ ಸಾಮಾಜಮುಖಿಯಾಗಿ ಕಲಿಸಬಹುದಾದ ಎಲ್ಲ ಗುಣಗಳನ್ನು ಹೇಳಿಕೊಡಲಾಗುತ್ತಿದೆ. ಕೃಷಿ ಕ್ಷೇತ್ರವೆಂದರೆ ಇಂದು ಯಾರಿಗೂ ಬೇಡವಾದ ಕ್ಷೇತ್ರವಾಗಿದ್ದು, ಅಂತಹ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ನಮ್ಮ ಜಿಲ್ಲೆಯ ಡಾ.ಎಂ.ಸಿ. ರಂಗಸ್ವಾಮಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಶಿವಮೊಗ್ಗ ಆಕ್ಸ್‌ಫರ್ಡ್ ಶಾಲೆಯ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಲೋಕೇಶ್, ಶಾಲೆಯ ಮುಖ್ಯ ಶಿಕ್ಷಕಿ ಬ್ಲೆಸ್ಸಿ ಶ್ಯಾಮ್, ಸಂಯೋಜಕರಾದ ಕಾವ್ಯಶ್ರೀ, ನಳಿನಾಕ್ಷಿ, ಅರ್ಜುನ್ ಇತರರಿದ್ದರು.