- ಗೋಣಿಸೋಮನಹಳ್ಳಿ ಗ್ರಾಮ
- ರೈತ ಕೃಷಿ ಸಾಲ ತೀರಿಸಲಾಗದೆ
ಹಳೇಬೀಡು: ಹೋಬಳಿಯ ಗೋಣಿಸೋಮನಹಳ್ಳಿ ಗ್ರಾಮದ ರೈತ ಕೃಷಿ ಸಾಲ ತೀರಿಸಲಾಗದೆ ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೇಶ್ (45) ಆತ್ಮಹತ್ಯೆಗೆ ಶರಣಾದ ರೈತ. ಹತ್ತು ವರ್ಷಗಳ ಹಿಂದೆ ವಿವಿಧ ಬ್ಯಾಂಕ್‌ಗಳಲ್ಲಿ ಕೃಷಿಗಾಗಿ ಮಾಡಿಕೊಂಡಿದ್ದ ಸಾಲವನ್ನು ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಗಳು ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿ ಸಾಲ ಮಾಡಿದ ಹಣದಿಂದ ಕೃಷಿ ಚಟುವಟಿಕೆ ನಡೆಸಿದ್ದು ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ನಡುವೆ ಸರಿಯಾದ ಬೆಂಬಲ ಬೆಲೆ ಸಿಗದ ಹಿನ್ನೆಲೆಯಲ್ಲಿ ನಷ್ಟ ಭರಿಸಲು ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು 20 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.
ಸಾಲ ಮರುಪಾವತಿಗಾಗಿ ಬ್ಯಾಂಕ್ ಸಿಬ್ಬಂದಿ ಮನೆ ಜಪ್ತಿ ಮಾಡಲು ಬಂದಾಗ ತನ್ನ ಕೃಷಿ ಜಮೀನನ್ನು ಮಾರಾಟ ಮಾಡಿ ಬಡ್ಡಿ ರಹಿತ ಸಾಲ ಪಾವತಿಸಿದ್ದಲ್ಲದೆ, ಅದಕ್ಕಾಗಿ ಮತ್ತಷ್ಟು ಕೈ ಸಾಲ ಹಾಗೂ ಇನ್ನೊಂದು ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು ಎನ್ನಲಾಗಿದೆ. ಜಮೀನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಮುಂದೆ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ ಎಂದು ಯೋಚಿಸಿ ಪಕ್ಕದ ಜಮೀನಿನ ತೇಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.