ಶಿವನಂಜೇಗೌಡ ಅವರಿಗೆ 20 ವರ್ಷಗಳ ಕಾನೂನು ಹೋರಾಟದ ಫಲವಾಗಿ ಆರ್‌ಟಿಒ ಅಧಿಕಾರಿ ಹುದ್ದೆ ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ಶುಕ್ರವಾರ ಅಭಿನಂದಿಸಿದ್ದಾರೆ.
- Two decades of legal struggle
ಬಾಗೂರು: ಗ್ರಾಮದ ಶಿವನಂಜೇಗೌಡ ಅವರಿಗೆ 20 ವರ್ಷಗಳ ಕಾನೂನು ಹೋರಾಟದ ಫಲವಾಗಿ ಆರ್‌ಟಿಒ ಅಧಿಕಾರಿ ಹುದ್ದೆ ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ಶುಕ್ರವಾರ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿವನಂಜೇಗೌಡ, ಕೋಲಾರ ಆರ್‌ಟಿಒ ಆಗಿ ಸುಪ್ರೀಂಕೋರ್ಟ್ ಆದೇಶದ ಅನ್ವಯ ನೇಮವಾಗಿದ್ದೇನೆ. ಇದಕ್ಕೆ ಗ್ರಾಮಸ್ಥರ ಸಹಕಾರ, ನಿರಂತರ ಹೋರಾಟ ಕಾರಣ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಆಡಳಿತ ನೀಡುವೆ ಎಂದು ತಿಳಿಸಿದ್ದಾರೆ.
ಕೆಪಿಎಸ್‌ಸಿ ನೇಮಕಾತಿ ವೇಳೆ ಮೆಡಿಕಲ್‌ನಲ್ಲಿ ನಿಗದಿತ ಎತ್ತರ ಇಲ್ಲ ಎಂಬ ಕಾರಣಕ್ಕೆ ಮೆರಿಟ್ ಇದ್ದರೂ ನನಗೆ ಕೆಲಸ ಕೊಟ್ಟಿರಲಿಲ್ಲ. ಈ ಸಂಬಂಧ ಕೆಪಿಎಸ್‌ಸಿ ವಿರುದ್ಧ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಪ್ರಾರಂಭಿಸಿದೆ. ಎರಡು ದಶಕಗಳ ಹೋರಾಟಕ್ಕೆ ಇದೀಗ ಸೂಕ್ತ ಫಲ ಸಿಕ್ಕಿದ್ದು, ಏಪ್ರಿಲ್ 2ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರ ಸಾರಿಗೆ ಮೋಟಾರ್ ವಾಹನ ನಿರೀಕ್ಷಕರ ಹುದ್ದೆಯನ್ನು ಕೋಲಾರದಲ್ಲಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಮಂಜೇಗೌಡ ಮಾತನಾಡಿ, ನಮ್ಮ ಗ್ರಾಮದ ಶಿವನಂಜೇಗೌಡ ಅವರು 20 ವರ್ಷಗಳ ನಿರಂತರ ಹೋರಾಟದ ಫಲವಾಗಿ ಆರ್‌ಟಿಒ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರ ಹೋರಾಟ ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಮುಖಂಡರಾದ ಶಂಕರಲಿಂಗೇಗೌಡ ಹಾಗೂ ಮಿಲ್ಟ್ರಿ ಮಂಜು ಮಾತನಾಡಿದರು. ಬೆಟ್ಟೇಗೌಡ, ಮನು, ಬಿ.ಎಸ್. ಶೇಖರ್, ಕಾಂತರಾಜ್, ಜಯರಾಮ್, ವಾಸು, ಶಿವರಾಜ್, ಸುರೇಶ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಿ. ಎನ್. ಸೋಮೇಗೌಡ, ಮಧು, ರೂಪೇಶ್, ಚಂದ್ರೇಗೌಡ ಇತರರು ಇದ್ದರು.