ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 2019 ಉಗ್ರರ ದಾಳಿಯಿಂದ ಹುತಾತ್ಮರಾದ ಸಿಆರ್‌ಪಿಎಫ್‌ನ 44 ಯೋಧರಿಗೆ ಶ್ರದ್ಧಾಂಜಲಿ ಹಾಗೂ ನಗರದ ಅರೆಸೇನಾ ಭವನಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದಲ್ಲಿ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಬೈಕ್ ಜಾಥಾ ಎಲ್ಲರ ಗಮನ ಸೆಳೆಯಿತು. 
ಹಾಸನ

ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
  • ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದಿಂದ ಬೈಕ್ ಜಾಥಾ
ಹಾಸನ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಸಿಆರ್‌ಪಿಎಫ್‌ನ 44 ಯೋಧರಿಗೆ ಶ್ರದ್ಧಾಂಜಲಿ ಹಾಗೂ ನಗರದ ಅರೆಸೇನಾ ಭವನಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದಲ್ಲಿ ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟದಿಂದ ಶನಿವಾರ ಆಯೋಜಿಸಿದ್ದ ಬೃಹತ್ ಬೈಕ್ ಜಾಥಾ ಎಲ್ಲರ ಗಮನ ಸೆಳೆಯಿತು.
ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ವಿ.ನಾಗೇಶ್ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮುಂಭಾಗದಿಂದ ಬೆಳಗ್ಗೆ ಆರಂಭವಾದ ರ‌್ಯಾಲಿಯಲ್ಲಿ ನಿವೃತ್ತ ಸೈನಿಕರ ಜತೆಗೆ ಅವರ ಕುಟುಂಬ ಸದಸ್ಯರು, ಮಕ್ಕಳೂ ಭಾಗಿಯಾಗಿ, ಅಗಲಿದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಕೆಲವರು ಸೇನಾ ಸಮವಸ್ತ್ರ ಧರಿಸಿ, ರಾಷ್ಟ್ರಧ್ವಜ ಹಿಡಿದು ಗಮನ ಸೆಳೆದರು. ಡೇರಿ ವೃತ್ತದ ಬಳಿಯಿಂದ ಹೊರಟ ರ‌್ಯಾಲಿಯು, ರಿಂಗ್ ರಸ್ತೆ, ಸುಬೇದಾರ್ ನಾಗೇಶ್ ವೃತ್ತ, ಸಾಲಗಾಮೆ ರಸ್ತೆ, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ, ಎನ್.ಆರ್.ವೃತ್ತ, ಬಿಎಂ ರಸ್ತೆ, ರೈಲ್ವೆ ನಿಲ್ದಾಣ ಮುಂಭಾಗ, ಡೇರಿ ವೃತ್ತದ ಮೂಲಕ ಕೆಂಚಟ್ಟಹಳ್ಳಿಯಲ್ಲಿರುವ ಅರೆಸೇನಾ ಪಡೆಯ ಭವನದ ಬಳಿಗೆ ತೆರಳಿ ಕೊನೆಗೊಂಡಿತು. ಆಗಮಿಸಿದ್ದ ಎಲ್ಲರಿಗೂ ಅಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ವಿ.ನಾಗೇಶ್, ಸಿಆರ್‌ಪಿಎಫ್‌ನ 44 ಯೋಧರು ಹುತಾತ್ಮರಾಗಿ 7 ವರ್ಷ ತುಂಬಿದೆ. ಹಾಗೆಯೇ ರಾಜ್ಯದಲ್ಲೇ ಮೊದಲ ಬಾರಿಗೆ ಹಾಸನದಲ್ಲಿ ಅರೆಸೇನಾ ಭವನ ನಿರ್ಮಾಣಗೊಂಡು 1 ವರ್ಷ ಕಳೆದಿದೆ. ಇದರ ಸ್ಮರಣಾರ್ಥ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ನಮ್ಮವೂ ಕೆಲ ಬೇಡಿಕೆ ಇದ್ದು, ಈಗಾಗಲೇ ಸರ್ಕಾರದ ಮುಂದೆ ಇಡಲಾಗಿದ್ದು, ಈಡೇರಿಸುವ ವಿಶ್ವಾಸವಿದೆ ಎಂದ ಅವರು, ಮುಂದಿನ ದಿನಗಳಲ್ಲಿ ನಮ್ಮ ಒಕ್ಕೂಟದಿಂದ ವಿವಿಧ ರೀತಿಯ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ರ‌್ಯಾಲಿಯಲ್ಲಿ ಉಪಾಧ್ಯಕ್ಷರಾದ ಎಂ.ಜಿ.ರಮೇಶ್, ನಾರಾಯಣಪ್ಪ, ನಾಗಪ್ಪ, ಕಾರ್ಯದರ್ಶಿ ಎಚ್.ಆರ್.ವಿಜಯಕುಮಾರ್, ಎಚ್.ಕುಮಾರ್ ಇತರರಿದ್ದರು.