ಸಕಲೇಶಪುರ ತಾಲೂಕಿನಲ್ಲಿ ಸುರಿಯುತ್ತಿರುವ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ.  
ಹಾಸನ

ಶಿರಾಡಿಘಾಟ್‌ನ ಹಲವೆಡೆ ಧರೆಗುರುಳಿದ ಮರಗಳು

ಸಕಲೇಶಪುರ: ತಾಲೂಕಿನಲ್ಲಿ ಸುರಿಯುತ್ತಿರುವ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಅನೇಮಹಲ್ ಗ್ರಾಮ ಸಮೀಪದ ಅಡಾಣಿ ಗುಡ್ಡ ಹಲವೆಡೆ ಕುಸಿದಿದ್ದರೆ, ಕಪ್ಪಳಿ ಗ್ರಾಮ ಹಾಗೂ ದೊಡ್ಡತಪ್ಪಲೆ ಗ್ರಾಮ ಸಮೀಪ ಭೂಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸಂಚಾರಕ್ಕೆ ತೊಡಕಾದಂತೆ ಮಣ್ಣು ತೆರವುಗೊಳಿಸಿದೆ.
ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ತೆರಳುತ್ತಿದ್ದ ಡಾಂಬರ್ ತುಂಬಿದ ಲಾರಿ ಅತಿಯಾದ ಮಳೆಗೆ ಉರುಳಿ ಬಿದ್ದು ಡಾಂಬರ್ ಚೆಲ್ಲಿಸಿದ್ದರಿಂದ ವಾಹನ ಸಂಚಾರಕ್ಕೆ ಕೆಲಕಾಲ ತೊಡಕು ಉಂಟಾಗಿತ್ತು. ಶಿರಾಡಿಘಾಟ್‌ನ ಹಲವೆಡೆ ಮರಗಳು ಧರೆಗುರುಳಿದ್ದು ಹೆದ್ದಾರಿ ಇಲಾಖೆ ತೆರವುಗೊಳಿಸಿದೆ. ಒಟ್ಟಾರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ ನಿಗ್ರಹ ಪಡೆ ಕಾರ್ಯನಿರ್ವಹಣೆ ಮುಂದಾಗಿದ್ದು, ಹೆಚ್ಚಿನ ಅವಘಡಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸುತ್ತಿದೆ.