ಹಿರೀಸಾವೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಭೇಟಿ ನೀಡಿದ್ದರು.
ಹಿರೀಸಾವೆ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಆಸ್ಪತ್ರೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಲಿದ್ದು, ಜನರಿಂದ ಸೌಜನ್ಯದಿಂದ ವರ್ತಿಸಿ ಚಿಕಿತ್ಸೆ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ವೈದ್ಯರಿಗೆ ಸೂಚಿಸಿದರು.
ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಡಯಾಲಿಸಿಸ್ ಯೂನಿಟ್ ಅಳವಡಿಕೆ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳ ವೀಕ್ಷಿಸಿ ಮಾತನಾಡಿ, ಮಧುಮೇಹಿಗಳಿಗೆ ಅನುಕೂಲವಾಗುವಂತೆ ಡಯಲಿಸಿಸ್ ಯೂನಿಟ್ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಸಮುದಾಯ ಆರೋಗ್ಯ ಕೇಂದ್ರವನ್ನು ವಿವಿಧ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಶೌಚಗೃಹ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿಗೊಳಿಸಲಾಗಿದೆ. ಸಮುದಾಯ ಕೇಂದ್ರದ ನವೀಕರಣಕ್ಕೆ 1.50 ಕೋಟಿ ರೂ. ಅನುದಾನ ಅಗತ್ಯವಿದ್ದು, ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವರ ಗಮನ ಸೆಳೆದು ಶೀಘ್ರ ಅನುದಾನ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಆಸ್ಪತ್ರೆಗೆ ಪ್ರತಿದಿನ 350ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೊರರೋಗಿಗಳು ಆಗಮಿಸುತ್ತಾರೆ. ಯಾವುದೇ ಸಮಸ್ಯೆ ಹಾಗೂ ಗೊಂದಲವಾಗದಂತೆ ಸೌಜನ್ಯದಿಂದ ವರ್ತಿಸಿ ಜನತೆಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಆರೋಗ್ಯ ಇಲಾಖೆಯ ಸಿಇಒ ಅವರಿಗೆ ಸ್ಥಳದಿಂದಲೇ ಕರೆ ಮಾಡಿ, ಡಯಾಲಿಸಿಸ್ ಯೂನಿಟ್ ಹಾಗೂ ಇತರ ಪರಿಕರಗಳನ್ನು ಜರೂರಾಗಿ ಅಳವಡಿಸಿ ಶೀಘ್ರದಲ್ಲಿಯೇ ಚಿಕಿತ್ಸೆ ಚಿಕಿತ್ಸೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಮಾಜಿ ಅಧ್ಯಕ್ಷ ಎಚ್.ಈ.ಬೋರಣ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ರವಿಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಜೆ.ಮಹೇಶ್, ನಿರ್ದೇಶಕ ಹಿಂದ್ಲಟ್ಟಿ ಬೋರೇಗೌಡ, ಪ್ರಮುಖರಾದ ವೆಂಕಟೇಶ್, ಫೈನಾನ್ಸ್ ಮಹೇಶ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಇತರರು ಇದ್ದರು.