ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನದ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ ಉದ್ಘಾಟಿಸಿದರು. ಡಾ.ರಾಜಣ್ಣ, ಡಾ.ಶಿವರಾಜ್, ಡಾ.ಸಿ.ವಿ.ಕವಿತಾ, ಡಾ. ಕೆ.ಯು.ರಾಘವೇಂದ್ರ ಪ್ರಸಾದ್ ಇತರಿದ್ದರು.
- ಎಚ್‌ಐವಿ ಸೋಂಕಿತರನ್ನು ನಿರ್ಲಕ್ಷಿೃಸದೆ ಚಿಕಿತ್ಸೆ ಕೊಡಿಸಿ
- ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ ಸಲಹೆ
- ಏಡ್ಸ್ ನಿಯಂತ್ರಣ ದಿನಾಚರಣೆ ಕಾರ್ಯಕ್ರಮ
ಹಾಸನ: ಎಚ್‌ಐವಿ ಪೀಡಿತರನ್ನು ತುಚ್ಛವಾಗಿ ನೋಡುವ ಬದಲು, ಅವರೂ ಸಮಾಜದಲ್ಲಿ ಒಬ್ಬರು ಎಂದು ಭಾವಿಸಿ, ಧೈರ್ಯ ತುಂಬಿ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ.ದಾಕ್ಷಾಯಿಣಿ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಹಾಸನ, ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಗಳು, ಎನ್‌ಎಸ್‌ಎಸ್ ಘಟಕಗಳು ಮತ್ತು ರೆಡ್ ರಿಬ್ಬನ್ ಕ್ಲಬ್‌ಗಳ ಆಶ್ರಯದಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಏಡ್ಸ್ ನಿಯಂತ್ರಣ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಾದ್ಯಂತ 1988ರಿಂದ ಏಡ್ಸ್ ದಿನ ಆಚರಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಏಡ್ಸ್ ಕುರಿತಾಗಿ ತಿಳಿವಳಿಕೆ ನೀಡುವ ಉದ್ದೇಶದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಏಡ್ಸ್ ಕುರಿತು ಜನರು ಹೊಂದಿರುವ ಮೂಢನಂಬಿಕೆಗಳು, ತಪ್ಪು ಭಾವನೆಗಳನ್ನು ಹೋಗಲಾಡಿಸುವುದಕ್ಕಾಗಿ ಸಂಘ-ಸಂಸ್ಥೆಗಳು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಏಡ್ಸ್ ರೋಗಿಗಳಿಗೆ ವೈದ್ಯಕೀಯ ತಪಾಸಣೆ ಪಡೆದುಕೊಳ್ಳಲು ಸೂಕ್ತ ಮಾರ್ಗದರ್ಶನವನ್ನು ನೀಡಿ ಆ ರೋಗದಿಂದ ಅವರನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ. ಇವರ ಈ ಕೆಲಸ ಶ್ಲಾಘನೀಯ ಎಂದರು.
ಯುವಜನರು ದೇಶವನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ಇಂಥ ಕೃತ್ಯಗಳು ಆಗದಂತೆ ಯುವಜನರು ಎಚ್ಚರ ವಹಿಸಬೇಕು. ಜತೆಗೆ ಸುತ್ತಮುತ್ತಲಿನವರಿಗೂ ಈ ರೋಗದ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲರೂ ಕೈಜೋಡಿಸಿದರೆ ಮಾತ್ರ ಸ್ವಾಸ್ಥೃ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ರಾಜಣ್ಣ ಮಾತನಾಡಿ, ಎಚ್‌ಐವಿ ಸೋಂಕಿನಿಂದ ಯಾರೂ ಸಾಯುವುದಿಲ್ಲ. ಆದರೆ, ಬೇರೆ ಬೇರೆ ಕಾಯಿಲೆಗಳು ಬರುವಂಥ ಸಾಧ್ಯತೆಗಳು ಇವೆ. ಎಚ್‌ಐವಿ ಅಸುರಕ್ಷಿತ ಲೈಂಗಿಕ ಕ್ರಿಯೆ ಮತ್ತಿತರ ಕಾರಣಗಳಿಂದ ಎಚ್‌ಐವಿ ಸೋಂಕು ಹರಡುತ್ತದೆ. ಹಾಗಾಗಿ ಎಚ್ಚರ ವಹಿಸುವಂತೆ ಸಲಹೆ ನೀಡಿದರು.
ಪ್ರಮಾಣ ವಚನ ಬೋಧಿಸಲಾಯಿತು ಹಾಗೂ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರಿಗೆ ಉತ್ತಮವಾಗಿ ಚಿಕಿತ್ಸೆ ನೀಡಿರುವ ಹಿಮ್ಸ್‌ನ ಡಾ.ಶಿವರಾಜ್ ಹಾಗೂ ಶಾಂತಿಗ್ರಾಮ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು. ಏಡ್ಸ್ ಕುರಿತು ಕಿರು ನಾಟಕ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿಮ್ಸ್ ಪ್ರಾಂಶುಪಾಲೆ ಡಾ.ಸಿ.ವಿ.ಕವಿತಾ, ವೈದ್ಯಕೀಯ ಅಧೀಕ್ಷಕ ಡಾ. ಕೆ.ಯು.ರಾಘವೇಂದ್ರ ಪ್ರಸಾದ್, ಡಾ. ತೇಜಸ್ವಿ ಇತರರಿದ್ದರು.