ಬೇಲೂರಿನ ಜೂನಿಯರ್ ಕಾಲೇಜು ಮೈದಾನದ ಹಿಂಭಾಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಇಕ್ಬಾಲ್, ಶ್ರೀಧರ್ ಕಂಕನವಾಡಿ, ಡಿಂಪಲ್ ರಾಣಿ, ಹರೀಶ್, ಬಸವರಾಜ್ ಸಿಗ್ಗಾವಿ ಇತರರಿದ್ದರು.
ಬೇಲೂರು: ಆಶ್ರಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದ ಹಿಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗುಡಿಸಲು ವಾಸಿಗಳ 54 ಅರ್ಜಿಗಳಿದ್ದು, ಹಳೆಯ ಅರ್ಜಿಗಳನ್ನು ಸೇರಿಸಿ ಒಟ್ಟು 61 ಅರ್ಜಿಗಳನ್ನು ಪರಿಗಣಿಸಲಾಗಿದೆ. 192 ನಿವೇಶನಗಳ ಪೈಕಿ ಮೊದಲ ಹಂತದಲ್ಲಿ 64 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಲಾಗಿದ್ದು, ಕಳೆದ 15 ದಿನಗಳಿಂದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು ಸಮಿತಿಯಲ್ಲಿ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಅನುಮೋದನೆ ದೊರೆತ ತಕ್ಷಣ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಬಡವರ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವುದೇ ನಿಜವಾದ ಜನ ಸೇವೆಯಾಗಿದೆ ಎಂದರು.
ಆಶ್ರಯ ಸಮಿತಿ ಸದಸ್ಯ ಇಕ್ಬಾಲ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಾಗೂ ಮನೆಗಳ ಹಂಚಿಕೆ ನಡೆದು 25 ರಿಂದ 30 ವರ್ಷಗಳಾಗಿವೆ. ಬಡವರಿಗೆ ಮನೆ ಒದಗಿಸುವ ಉದ್ದೇಶದಿಂದ ತಹಸೀಲ್ದಾರ್ ಕಚೇರಿಯಿಂದ 5 ಎಕರೆ ಜಾಗ ಮಂಜೂರಾಗಿದ್ದರೂ ಅದರಲ್ಲಿ 2.5 ಎಕರೆ ಜಾಗದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ತಡೆಯಾಜ್ಞೆ ಜಾರಿಯಲ್ಲಿದೆ. ಆದರೂ ತಡೆಯಾಜ್ಞೆ ಇಲ್ಲದ ಉಳಿದ 2.5 ಎಕರೆ ಜಾಗದಲ್ಲಿ ವಿನ್ಯಾಸ ರೂಪಿಸಿ ಸುಮಾರು 100 ನಿವೇಶನಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಬಂಟೇನಹಳ್ಳಿಯಲ್ಲಿರುವ ಸುಮಾರು 4 ಎಕರೆ ಜಾಗದಲ್ಲಿ ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಶಂಕರದೇವರ ಪೇಟೆ, ಹೊಸನಗರ ಹಾಗೂ ಚನ್ನಕೇಶವ ನಗರ ಪ್ರದೇಶಗಳಲ್ಲಿಯೂ ಆಶ್ರಯ ಯೋಜನೆಗಾಗಿ ಸಾಕಷ್ಟು ಜಾಗ ಲಭ್ಯವಿದೆ. ಸಾಕಷ್ಟು ವರ್ಷಗಳಿಂದ ಮನೆಗಾಗಿ ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ಹಾಗೂ ಒಂದೇ ಕುಟುಂಬದಲ್ಲಿ ಹಲವು ಉಪ ಕುಟುಂಬಗಳಾಗಿ ವಾಸಿಸುತ್ತಿರುವವರಿಗೆ ಶಾಸಕರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಮನೆ ಹಾಗೂ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು,
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಆಶ್ರಯ ಸಮಿತಿ ಸದಸ್ಯರಾದ ಡಿಂಪಲ್ ರಾಣಿ, ಹರೀಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಆರೋಗ್ಯಾಧಿಕಾರಿ ಲೋಹಿತ್ ಇತರರಿದ್ದರು.