ಹೆಲ್ಮೆಟ್ ಧರಿಸದೆ ಚನ್ನರಾಯಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ಮೂರು ಜನ ಪ್ರಯಾಣಿಸುತ್ತಿರುವುದು. 
ಹಾಸನ

ಚನ್ನರಾಯಪಟ್ಟಣದಲ್ಲಿ ಪಾಲನೆಯಾಗದ ಸಂಚಾರ ನಿಯಮ

ಪ್ರಮುಖ ಮುಖ್ಯಾಂಶಗಳು

  • ಅಪಘಾತಗಳ ಪ್ರಮಾಣ ನಿರಂತರವಾಗಿ ಹೆಚ್ಚುತ್ತಲೇ ಇದೆ
  • ಸಂಚಾರ ಪೊಲೀಸ್ ಠಾಣೆ ಪ್ರಾರಂಭವಾಗಿ ಎಂಟು ವರ್ಷ
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಸಂಚಾರ ಪೊಲೀಸ್ ಠಾಣೆ ಪ್ರಾರಂಭವಾಗಿ ಎಂಟು ವರ್ಷ ಕಳೆದರೂ ಸಿಗ್ನಲ್ ಜಂಪ್, ಹೆಲ್ಮಟ್ ಧರಿಸದಿರುವುದು, ಸರ್ಕಲ್ ಸುತ್ತು ಹಾಕದೆ ಮತ್ತೊಂದು ರಸ್ತೆಗೆ ತೆರಳುವುದು ಇಂಡಿಕೇಟರ್ ಬಳಸದಿರುವುದು, ಲೈಸನ್ಸ್ ಇಲ್ಲದ ಮಕ್ಕಳು ವಾಹನ ಚಲಾಯಿಸುವ ಪ್ರಕರಣ ಹೆಚ್ಚಾಗುತ್ತಿದೆ.
ಪಟ್ಟಣದಲ್ಲಿ ಜನವಸತಿ ಪ್ರದೇಶ ವಿಸ್ತಾರವಾಗಿ ಬೆಳೆಯುತ್ತಿರುವುದರಿಂದ ವಾಹನದಟ್ಟಣೆ ಹಾಗೂ ಜನಸಂದಣಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಸಿಗ್ನಲ್ ದೀಪಗಳ ಅನಿವಾರ್ಯತೆಯನ್ನು ಮನಗಂಡು ಶಾಸಕ ಸಿ.ಎನ್.ಬಾಲಕೃಷ್ಣ ಸಿಗ್ನಲ್ ದೀಪಗಳ ಅಳವಡಿಕೆಗೆ ಕ್ರಮ ವಹಿಸಿದರು. ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ವಾಹನಗಳ ಬಳಕೆ ವಿಪರೀತವಾಗಿ ಹೆಚ್ಚಿದೆಯಾದರೂ ಸಂಚಾರ ನಿಯಮ ಶಿಸ್ತಿನಿಂದ ಪಾಲನೆಯಾಗುತ್ತಿಲ್ಲ. ಪರಿಣಾಮ, ರಸ್ತೆ ಅಪಘಾತಗಳ ಪ್ರಮಾಣ ನಿರಂತರವಾಗಿ ಹೆಚ್ಚುತ್ತಲೇ ಇದೆ. ತಾಲೂಕಿನಲ್ಲಿ 2025ನೇ ವರ್ಷದಲ್ಲಿ ಒಟ್ಟು 147 ಅಪಘಾತ ಸಂಭವಿಸಿ, 154 ಜನರು ಗಾಯಗೊಂಡಿದ್ದು, 38 ಜನರು ಜೀವ ಕಳೆದುಕೊಂಡಿದ್ದಾರೆ.
ಕೆಲವರಿಗೆ ವಾಹನಗಳನ್ನು ಮಿತಿಮೀರಿದ ವೇಗ ಹಾಗೂ ಬೇಕಾಬಿಟ್ಟಿ ಓಡಿಸುವುದು ಖಯಾಲಿ. ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದು, ದ್ವಿಚಕ್ರ ವಾಹನದ ಮೇಲೆ ಹೆಚ್ಚು ಜನರು ಸವಾರಿ ಮಾಡುವುದು... ಇಂತಹವು ನೋಟಗಳು ನಿತ್ಯ ಕಾಣ ಸಿಗಲಿವೆ. ಪಟ್ಟಣದ ಪ್ರಮುಖ ವೃತ್ತ ಎನಿಸಿಕೊಂಡಿರುವ ನವೋದಯ ವೃತ್ತದಲ್ಲಿ ಪಾದಚಾರಿಗಳಿಗೆ ಮೃತ್ಯುಕೂಪವಾಗಿದೆ. ಮೈಯೆಲ್ಲ ಕಣ್ಣಾಗಿಸಿಕೊಂಡು ರಸ್ತೆ ದಾಟಿದರಷ್ಟೇ ಜೀವ ಉಳಿಯುತ್ತದೆ. ಕೊಂಚ ಎಚ್ಚರ ತಪ್ಪಿದರೂ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನೂ ಲೆಕ್ಕಿಸದೆ ನುಗ್ಗಿ ಬರುವ ವಾಹನಗಳಿಗೆ ಬಲಿಯಾಗಬೇಕಾಗುತ್ತದೆ !
ಹಸಿರು ದೀಪ ಬೆಳಗಿತಲ್ಲ ಎಂದುಕೊಂಡು ರಸ್ತೆ ದಾಟಲು ಹೆಜ್ಜೆ ಇಡುತ್ತಿದ್ದಂತೆಯೇ ಮತ್ತೊಂದು ಕಡೆಯಿಂದ ಶರವೇಗದಲ್ಲಿ ವಾಹನಗಳು ಮುಂದೆ ಸಾಗದಂತೆ ತಡೆಯುತ್ತವೆ.
ಇದರಿಂದ ಜನರು ಹೈರಾಣಾಗುವಂತಾಗಿದೆ. ವೃತ್ತಕ್ಕೆ ಹೊಂದಿಕೊಂಡಂತಿರುವ ನವೋದಯ ವಿದ್ಯಾ ಸಂಸ್ಥೆ, ಚಾಮುಂಡೇಶ್ವರಿ ವಿದ್ಯುತ್ ನಿಗಮ ಹಾಗೂ ಕೋಟೆ ಬಡಾವಣೆಗೆ ಪ್ರವೇಶ ಮಾಡಲು ಇದೇ ಪ್ರಮುಖ ವೃತ್ತವಾಗಿದ್ದು ಕೆಲವು ಮೀಟರ್‌ಗಳ ಅಂತರದಲ್ಲಿ ತಾಲೂಕು ಪಂಚಾಯಿತಿ ಮಾಧ್ಯಮಿಕ ಶಾಲೆ, ಸ್ವತಂತ್ರ ಪದವಿ ಪೂರ್ವ ಕಾಲೇಜು ಇದೆ. ಇದಲ್ಲದೆ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿಗೆ ನವೋದಯ ವೃತ್ತದ ಮುಖಾಂತರವೇ ಸಾಗಬೇಕಾಗಿರುವುದರಿಂದ ನಾನಾ ಪ್ರದೇಶಗಳಿಂದ ಬರುವ ಶಾಲಾ ವಿದ್ಯಾರ್ಥಿಗಳು, ಉದ್ಯೋಗಿಗಳು ಇದೇ ವೃತ್ತದಲ್ಲಿ ಇಳಿದು ಸಾಗುತ್ತಾರೆ. ಹಾಗಾಗಿ ಇಲ್ಲಿ ನಿತ್ಯವೂ ಜನರ ಓಡಾಟ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಪೀಕ್ ಅವರ್‌ನಲ್ಲಿ ಅಪಾರ ಪ್ರಮಾಣದ ವಾಹನಗಳು ವೃತ್ತದ ಮುಖಾಂತರ ಹಾದು ಹೋಗುತ್ತವೆ. ಇದರಿಂದಾಗಿ ಜನರು ರಸ್ತೆ ದಾಟಲು ಹರಸಾಹಸ ಮಾಡಬೇಕಿದೆ.
ಕಾರ್ಯರೂಪಕ್ಕೆ ಬಾರದ ಕಾನೂನು ಅಸ್ತ್ರ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಶಾಸಕ ಸಿ.ಎನ್. ಬಾಲಕೃಷ್ಣ 14 ಲಕ್ಷ ರೂ.ವೆಚ್ಚದಲ್ಲಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿಯನ್ನು ಅಳವಡಿಸಿದರು. ಮಾಧ್ಯಮದ ಮುಖಾಂತರ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆಯಾದರೂ ಕೆಲವು ವಾಹನ ಸವಾರರು ಇದ್ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಬಹುತೇಕರು ರಸ್ತೆಗಳಲ್ಲಿ ವಾಹನವನ್ನು ಬೇಕಾಬಿಟ್ಟಿ ಓಡಿಸುತ್ತಿದ್ದು, ನಿಯಮ ಪಾಲನೆಗೆ ಆಗ್ರಹಿಸುವ ಪೊಲೀಸರ ಯಾತನೆ ಹೇಳತೀರದಾಗಿದೆ. ಕೆಲವರು ಮಾತು ಕೇಳಿ ಇನ್ನೊಮ್ಮೆ ಪಾಲಿಸುವುದಾಗಿ ಮುನ್ನಡೆದರೆ, ಇನ್ನೂ ಕೆಲವರು ತಕರಾರು ಎತ್ತುವುದು ಸಾಮಾನ್ಯವಾಗಿದೆ. ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಸಹ ರಸ್ತೆ ನಿಯಮ ಉಲ್ಲಂಘನೆ ಸಾಮಾನ್ಯ ಎಂಬಂತಾಗಿದೆ.
ಜನರಿಗೆ ಮನದಟ್ಟು ಮಾಡಿಸಲಿ: ಸಂಚಾರ ಪೊಲೀಸರೂ ದಂಡ ಶೇಖರಣೆಯನ್ನೇ ಆದ್ಯತೆಯನ್ನಾಗಿ ಪರಿಗಣಿಸದೆ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ರೂಪಿಸುವ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ದಂಡದ ಭಯದಿಂದಲೇ ಅಪಘಾತಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗದು. ಬಹುಪಾಲು ಅಪಘಾತಗಳಿಗೆ ಪ್ರಮುಖ ಕಾರಣ ಚಾಲಕರಾದರೂ ರಸ್ತೆ ನಿರ್ವಹಣೆಯಲ್ಲಿನ ಲೋಪಗಳ ಪಾತ್ರವೂ ಇರುವುದನ್ನು ಅಲ್ಲಗಳೆಯಲಾಗದು. ರಸ್ತೆ ವಿನ್ಯಾಸ ಮತ್ತು ನಿರ್ವಹಣೆಯಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸವನ್ನೂ ಸರ್ಕಾರ ಆದ್ಯತೆಯಿಂದ ಮಾಡಬೇಕು. ಹೆಲ್ಮೆಟ್, ಸೀಟ್ ಬೆಲ್ಟ್‌ನಂತಹ ಸುರಕ್ಷಾ ಸಾಧನಗಳ ಬಳಕೆಯ ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಸಬೇಕು. ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂಬುದು ಜನರ ಆಶಯ.
ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ಅಪಘಾತಗಳೂ ಕೂಡ ಹೆಚ್ಚಾಗಿವೆ. ಸುಗಮ ಸಂಚಾರಕ್ಕೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗಿರುವ ಸಂಚಾರಿ ಸಿಗ್ನಲ್ ದೀಪಗಳು ಪಟ್ಟಣದ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿವೆ. ನಾಲ್ಕು ರಸ್ತೆಗಳು ಕೂಡುವ ವೃತ್ತದಲ್ಲಿ ಸಂಚಾರ ಸಿಗ್ನಲ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಕೆಲವು ಜನರು ಅವುಗಳನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಇದರಿಂದಾಗಿ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಈ ಸಮಸ್ಯೆಯನ್ನು ಪರಿಹರಿಸಲು ಜನರು ಸಂಚಾರ ನಿಯಮಗಳನ್ನು ಪಾಲಿಸಬೇಕು.
ಸಿ.ಎನ್.ಮೋಹನ್ ಮಾಜಿ ಪುರಸಭಾಧ್ಯಕ್ಷ, ಚನ್ನರಾಯಪಟ್ಟಣ
ಸಂಚಾರ ಕಾನೂನು ಕ್ರಿಮಿನಲ್ ಕಾನೂನುಗಳಷ್ಟೇ ಬಲಿಷ್ಠವಾಗಿದ್ದು, ಇವುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ. ವಾಹನಗಳಲ್ಲಿ ಸಂಚಾರ ಮಾಡುವಾಗ ಅನಾಹುತ ಸಂಭವಿಸದಿರಲು ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಸಹಕಾರ ನೀಡಬೇಕು. ಅಪಘಾತಗಳು ನಡೆಯದಂತೆ ಎಚ್ಚರ ವಹಿಸಿ ಅಮೂಲ್ಯ ಜೀವಗಳನ್ನು ಉಳಿಸಬೇಕು. ಪಟ್ಟಣದ ಎರಡು ಸಿಗ್ನಲ್ ವೃತ್ತಗಳಲ್ಲಿ ಎಎಸ್ ಅವರನ್ನು ಕರ್ತವ್ಯಕ್ಕೆ ನಿಯೋಜನೆಗೊಳಿಸಿ ಸಿಗ್ನಲ್ ಜಂಪ್ ಮಾಡುವವರಿಗೆ ದಂಡ ವಿಧಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು.
ಎನ್.ಕುಮಾರ್ ಪೊಲೀಸ್ ಉಪ ಅಧೀಕ್ಷಕ, ಚನ್ನರಾಯಪಟ್ಟಣ ಉಪವಿಭಾಗ
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ-2019 ಜಾರಿಯಲ್ಲಿದೆ. ವಾಹನ ಚಲಾಯಿಸುವವರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವ ಜತೆಗೆ ಇತರರ ಜೀವವನ್ನೂ ರಕ್ಷಣೆ ಮಾಡಬೇಕು. ಹೆಜ್ಜೆ ಹೆಜ್ಜೆಯಲ್ಲೂ ರಸ್ತೆ ಸುರಕ್ಷತಾ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ಸಾರ್ವಜನಿಕರು ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ಪೊಲೀಸ್ ಸಹಕರಿಸಬೇಕು.
ಸಿ.ಎನ್.ಬಾಲಕೃಷ್ಣ ಶಾಸಕ, ಶ್ರವಣಬೆಳಗೊಳ ಕ್ಷೇತ್ರ