ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಸಾರ್ವಜನಕರಿಗೆ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಮಾತನಾಡಿದರು. ಡಿವೈಎಸ್ಪಿ ಗಂಗಾಧರಪ್ಪ, ಸಿಪಿಐ ದಯಾನಂದ್, ಭಾನು, ಸಬ್ ಇನ್‌ಸ್ಪ್ಪೆಕ್ಟರ್ ಶ್ರೀನಿವಾಸ್, ಆನಂದ್ ಇತರರು ಇದ್ದರು. 
ಹಾಸನ

ಎಷ್ಟೇ ಶ್ರಮ ಹಾಕಿದರೂ ಬಗೆಹರಿಯದ ಟ್ರಾಫಿಕ್ ಸಮಸ್ಯೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಎಷ್ಟೇ ಶ್ರಮ ಹಾಕಿದರೂ ಬಗೆಹರಿಯದ ಟ್ರಾಫಿಕ್ ಸಮಸ್ಯೆ
  • ಅಡಿಷನಲ್ ಎಸ್ಪಿ ಶ್ರೀನಿಧಿ ಬೇಸರ
  • ಸಂಚಾರ ನಿಯಮ ಅರಿವು ಕಾರ್ಯಕ್ರಮ

ಹಾಸನ: ನಗರದಲ್ಲಿ ಅನೇಕ ವರ್ಷಗಳಿಂದ ಟ್ರಾಫಿಕ್ ಸಮಸ್ಯೆ ಕಾಡುತ್ತಿದ್ದು, ಪೊಲೀಸ್ ಇಲಾಖೆ ಎಷ್ಟೇ ಶ್ರಮ ಹಾಕಿದರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಬೇಸರ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಬಹುತೇಕ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಾರೆ. ಫುಟ್‌ಪಾತ್ ಸಮಸ್ಯೆ ಹೆಚ್ಚಾಗಿದೆ. ಪಾದಚಾರಿಗಳು ಫುಟ್‌ಪಾತ್ ಮೇಲೆ ನಡೆಯುವುದು ಅವರ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಫುಟ್‌ಪಾತ್ ಮೇಲೆ ಬಡವರು ಬದುಕುತ್ತಿದ್ದಾರೆ. ಹೀಗಾಗಿ ನಾವು ಪಾದಚಾರಿಗಳಿಗೆ ಹಕ್ಕು ನೀಡಬೇಕೋ ಅಥವಾ ಬಡವರು ಜೀವನ ನಡೆಸಲು ಬಿಡಬೇಕಾ ಜನರೇ ತೀರ್ಮಾನಿಸಬೇಕು ಎಂದರು.

ಹಾಸನಕ್ಕೆ ನಾನು ಬಂದು ಏಳು ತಿಂಗಳಾಯಿತು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಾಕಷ್ಟು ಕ್ರಮ ವಹಿಸಲು ನಮ್ಮ ಇಲಾಖೆಗೆ ಶ್ರದ್ಧೆ, ಉತ್ಸಾಹ ಇದೆ. ಸಮಸ್ಯೆ ಬಗೆಹರಿಸಲು ನಾವು ಒಂದು ಹೆಜ್ಜೆ ಮುಂದೆ ಹೋದರೆ, ನಾಲ್ಕು ಹೆಜ್ಜೆ ಹಿಂದೆ ಬರುವ ವಾತಾವರಣವಿದೆ ಎಂದು ಬೇಸರ ಹೊರಹಾಕಿದರು.
ಹೆಲ್ಮೆಟ್ ಧರಿಸಿ ಎಂದು ಎಷ್ಟೇ ಕಾರ್ಯಕ್ರಮ ಮಾಡಿದರೂ ವಾಹನ ಸವಾರರು ಬೇಜವಾಬ್ದಾರಿ ತೋರುತ್ತಿದ್ದಾರೆ. ನಾವು ಕೂಡ ಬೇಸತ್ತು ಶಾಲೆಗಳಿಗೆ ಹೋಗಿ ಕಾರ್ಯಾಗಾರ ಮಾಡಿ ನಿಮ್ಮ ಅಪ್ಪ, ಅಮ್ಮ ಹೆಲ್ಮೆಟ್ ಹಾಕದಿದ್ರೆ ನೀವು ಹೊರಗೆ ಬಿಡಬೇಡಿ ಎಂದು ಮಕ್ಕಳಿಗೆ ಮನವಿ ಮಾಡುವ ಪರಿಸ್ಥ್ಥಿತಿ ಬಂದಿದೆ. ಏಕಮುಖ ಸಂಚಾರ ರಸ್ತೆಯಲ್ಲೂ ಸವಾರರು ಅಡ್ಡಲಾಗಿ ಹೋಗುತ್ತಿದ್ದಾರೆ. ಇದಕ್ಕೆಲ್ಲ ಕೆಲವೇ ದಿನಗಳಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಹಾಸನ ಡಿವೈಎಸ್ಪಿ ಗಂಗಾಧರಪ್ಪ, ಮನೆ, ಅಂಗಡಿ ಮುಂಗಟ್ಟು ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗಳೇ ಇಲ್ಲದಂತಾಗಿದೆ. ಕಟ್ಟಡ ನಿರ್ಮಾಣಕ್ಕೂ ಮುನ್ನ ಪಾರ್ಕಿಂಗ್ ವ್ಯವಸ್ಥೆ ಮಾಡಲೇಬೇಕು. ನಗರದ ಮಧ್ಯ ಭಾಗದಲ್ಲೇ 14 ಆಸ್ಪತ್ರೆಗಳಿವೆ. ಅವುಗಳಲ್ಲಿ ಒಂದಕ್ಕೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪ್ಲಾನಿಂಗ್ ಮಾಡಿಸುವಾಗ ಪಾರ್ಕಿಂಗ್ ಜಾಗ ತೋರಿಸಿರುತ್ತಾರೆ. ನಂತರ ಆ ಜಾಗದಲ್ಲಿ ಲ್ಯಾಬ್, ಸ್ಕಾೃನಿಂಗ್ ಸೆಂಟರ್ ಮಾಡಿಕೊಂಡಿದ್ದಾರೆ. ಇದರಿಂದ ರೋಗಿಗಳ ಕಡೆಯವರು ರಸ್ತೆ ಮಧ್ಯೆ ವಾಹನ ನಿಲ್ಲಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆಗೆ ಈ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಿಪಿಐ ದಯಾನಂದ್, ಭಾನು, ಸಬ್ ಇನ್‌ಸ್ಪ್ಪೆಕ್ಟರ್ ಶ್ರೀನಿವಾಸ್, ಆನಂದ್ ಇತರರಿದ್ದರು.