ಹಾಸನದ ಸಂತೇಪೇಟೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಬುಧವಾರ ಗ್ರಾಮೀಣ ರೈತ ಮಹಿಳೆಯರಿಗೆ ಉಚಿತವಾಗಿ ಐದು ವಾರದ ನಾಟಿಕೋಳಿ ಮರಿಗಳನ್ನು ವಿತರಿಸಲಾಯಿತು. ಶಾಸಕ ಸ್ವರೂಪ್ ಪ್ರಕಾಶ್, ಡಾ.ಸುಂದರೇಶ್, ಗಿರೀಶ್, ಮಹೇಶ್, ಎಚ್.ಪಿ.ತಾರಾನಾಥ್ ಇತರರಿದ್ದರು. 
ಹಾಸನ

ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ, ಕೋಳಿ ಸಾಕಣೆಯಲ್ಲಿ ತೊಡಗಿ

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ, ಕೋಳಿ ಸಾಕಣೆಯಲ್ಲಿ ತೊಡಗಿ
  • ಮಹಿಳೆಯರಿಗೆ ಶಾಸಕ ಸ್ವರೂಪ್ ಪ್ರಕಾಶ್ ಸಲಹೆ
ಹಾಸನ: ರೈತ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆ ಹಾಗೂ ಕೋಳಿ ಸಾಕಣೆಯಲ್ಲಿ ತೊಡಗಿಸಿಕೊಳ್ಳುವಂತೆ ಶಾಸಕ ಸ್ವರೂಪ್ ಪ್ರಕಾಶ್ ಸಲಹೆ ನೀಡಿದರು.
ನಗರದ ಸಂತೇಪೇಟೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ಬುಧವಾರ ಪಶುಪಾಲನಾ ಮತ್ತು ಪಶುವ್ಯೆದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಬೆಂಗಳೂರು, ಮೈಸೂರು ವಿಭಾಗದ ಸಹಯೋಗದಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಉಚಿತವಾಗಿ ಐದು ವಾರದ ನಾಟಿಕೋಳಿ ಮರಿಗಳನ್ನು ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷ ಮಳೆಯೂ ಕ್ಷೀಣಿಸುತ್ತಿದೆ. ಆದ್ದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಕೋಳಿ ಸಾಕಣೆ ಹಾಗೂ ಹೈನುಗಾರಿಕೆ ಮುಖಾಂತರ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಜುಲೈ ಅಥವಾ ಆಗಸ್ಟ್‌ನಲ್ಲಿ ಹಾಸನದ ಮೆಗಾ ಡೇರಿ ಆರಂಭವಾಗುತ್ತಿದ್ದು, ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಸು ಖರೀದಿ ಮಾಡಲು ಒಂದು ಎಕರೆ ಜಮೀನು ಇದ್ದರೆ 3 ಲಕ್ಷ ರೂ.ಗಳನ್ನು ವರ್ಷಕ್ಕೆ ಶೇ.5 ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ ಎಂದು ಹೇಳಿದರು.
ಅರ್ಧ ಎಕರೆ ಜಮೀನು ಇದ್ದರೆ 2 ಲಕ್ಷ ರೂ. ಹಾಗೂ ಜಮೀನು ಇಲ್ಲದವರು ಹಾಲನ್ನು ಡೇರಿಗೆ ಹಾಕುತ್ತಿದ್ದರೆ ಡೇರಿ ಮುಖಾಂತರ ಷೇರು ಇದ್ದರೆ ಅವರಿಗೂ 1 ಲಕ್ಷ ರೂ.ಸಾಲ ನೀಡುವ ಮುಖಾಂತರ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.
ರಾಜ್ಯ ಸಹಕಾರ ಕುಕ್ಕುಟ ಮಹಾಮಂಡಳಿ ನಿರ್ದೇಶಕ ಸಾಗರ್ ಅರಸ್ ಮಾತನಾಡಿ, ಕೋಳಿ ಸಾಕಣೆ ಮಾಡುವ ಮಹಿಳೆಯರು ಸಮಯಕ್ಕೆ ಸರಿಯಾಗಿ ಅವುಗಳಿಗೆ ಲಸಿಕೆ ಹಾಕಿಸಬೇಕು ಹಾಗೂ ಅವುಗಳಿಗೆಂದೇ ಆಹಾರ ಖರೀದಿಸಿ 15ರಿಂದ 20 ದಿನಗಳು ನೀಡಬೇಕು ಎಂದರು.
ಜಿಲ್ಲಾ ಪ್ರಭಾರ ಉಪ ನಿರ್ದೇಶಕ ಡಾ.ಸುಂದರೇಶ್, ಮಹಿಳೆಯರಿಗೆ ಆದಾಯದ ಮೂಲವನ್ನು ರೂಪಿಸುವುದು ಹಾಗೂ ಗ್ರಾಮೀಣ ಮಟ್ಟದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೋಳಿ ಮರಿ ವಿತರಣೆ ಮಾಡುತ್ತಿದ್ದೇವೆ ಎಂದರು.
ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಸಹಾಯಕ ನಿರ್ದೇಶಕ ಮಹೇಶ್, ಮುಖ್ಯ ಪಶು ವೈದ್ಯಾಧಿಕಾರಿ ಎಚ್.ಪಿ.ತಾರಾನಾಥ್ ಇತರರಿದ್ದರು.