ತಾಲೂಕಿನ ಜೆ.ಸೂರಾಪುರ ಸಮೀಪ ನವಿಲನ್ನು ಕೊಂದು ಸಾಗಿಸುತ್ತಿದ್ದ ಆರೋಪಿಗಳನ್ನು ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿರುವುದು.
ಬೇಲೂರು: ತಾಲೂಕಿನ ಜೆ.ಸೂರಾಪುರ ಸಮೀಪ ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ವಲಯ ಅರಣ್ಯಾಧಿಕಾರಿಗಳ ತಂಡ ಮಂಗಳವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಂಗಡಿಹಳ್ಳಿ ಗ್ರಾಮದ ಬಯ್ಯ, ಸಹಮದ್‌ರಾಜು, ಶ್ರೀನಾಥ್ ಎಂಬುವರೇ ಬಂಧಿತ ಆರೋಪಿಗಳು. ಈ ಮೂವರು ಬೇಲೂರು ತಾಲೂಕಿನ ಜೆ.ಸೂರಾಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಹೆಣ್ಣು ನವಿಲನ್ನು ಕೊಂದು ಮಾಂಸವನ್ನು ಪಲ್ಸರ್ ಬೈಕ್‌ನಲ್ಲಿ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಪಲ್ಸರ್ ದ್ವಿಚಕ್ರ ವಾಹನ, 3 ಹಕ್ಕಿ ಹಿಡಿಯುವ ಬಲೆಗಳು, 5 ಪ್ಲಾಸ್ಟಿಕ್ ಹುರುಳುಗಳು, 1 ಚಾಟಿ ಬಿಲ್ ಅನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಬೇಲೂರು ವಲಯ ಕಚೇರಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಆರ್‌ಎಫ್‌ಒ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಯತೀಶ್, ಅರಣ್ಯ ರಕ್ಷಕರಾದ ಮಂಜುನಾಥ್, ಕವಿತಾ, ಪ್ರಕಾಶ್ ಸೇರಿದಂತೆ ಸಿಬ್ಬಂದಿ ಇದ್ದರು.