ಅರಕಲಗೂಡು ತಾಲೂಕಿನ ಬನ್ನೂರು ಕೆರೆಯಲ್ಲಿ ಸತ್ತು ಬಿದ್ದಿರುವ ಮೀನುಗಳು.
ಅರಕಲಗೂಡು: ತಾಲೂಕಿನ ಬನ್ನೂರು ದೊಡ್ಡಕೆರೆಯಲ್ಲಿ ಮಂಗಳವಾರ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಮಳೆಯಿಲ್ಲದೆ ಬೇಸಿಗೆ ಕಾಲವಾದ ಕಾರಣ ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿರಲಿಲ್ಲ. ಹೀಗಾಗಿ ಬಿಸಿಲಿನ ತಾಪ ತಾಳಲಾರದೆ ಮೀನುಗಳು ಸತ್ತಿರಬಹುದು ಎಂದು ಶಂಕಿಸಲಾಗಿದೆ.
ಕೆರೆ ದಡದಲ್ಲಿ ಸಾವಿರಾರು ಮೀನುಗಳು ಕಳೆಬರ ಬಿದಿದ್ದು, ಇನ್ನಷ್ಟು ಮೀನುಗಳ ಕಳೆ ಬರ ನೀರಿನಲ್ಲಿ ತೇಲುತ್ತಿವೆ. ಬನ್ನೂರು ದೊಡ್ಡಕೆರೆಯನ್ನು ಹೊಡೆನೂರು ಶಿವಣ್ಣ ಎಂಬುವರು ಗುತ್ತಿಗೆ ಪಡೆದು 65 ಸಾವಿರ ರೂ. ಬಿಡ್ ಪಡೆದು 2 ಲಕ್ಷ ರೂ. ಮೌಲ್ಯದ ಮೀನು ಮರಿಗಳನ್ನು ಸಾಕಲು ಬಿಟ್ಟಿದ್ದರು. ಇದೀಗ ಮೀನುಗಳು ಸತ್ತು ಹೋಗಿದ್ದು ಅಪಾರ ನಷ್ಟ ಉಂಟಾಗಿದೆ. ಹೀಗಾಗಿ ಮೀನುಗಾರಿಕೆ ಇಲಾಖೆ ಮತ್ತು ತಾಲೂಕು ಆಡಳಿತ ತಮಗೆ ಪರಿಹಾರ ನೀಡಬೇಕೆಂದು ಶಿವಣ್ಣ ಮನವಿ ಮಾಡಿದ್ದಾರೆ.