ಪ್ರಮುಖ ಮುಖ್ಯಾಂಶಗಳು
ಹಾಸನ:
ರಾಜ್ಯದ ಕೃಷಿ ಪದವೀಧರರು ಮತ್ತು ವಿದ್ಯಾರ್ಥಿಗಳ ಸಂಘಟನೆಯ ನೇತೃತ್ವದಲ್ಲಿ ಹಾಸನ ತಾಲೂಕಿನ ಕಾರೆಕೆರೆ ಗ್ರಾಮದಲ್ಲಿರುವ ಕೃಷಿ ಮಹಾವಿದ್ಯಾಲಯದ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕೃಷಿ ವಿದ್ಯಾರ್ಥಿಗಳಾದ ನಿರೀಕ್ಷಾ ಮಾತನಾಡಿ, ರಾಜ್ಯದ ಕೃಷಿ ಶಿಕ್ಷಣ ಹಾಗೂ ಕೃಷಿ ಪದವೀಧರರ ಭವಿಷ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಕೃಷಿ ಶಿಕ್ಷಣ ಮತ್ತು ಉದ್ಯೋಗದ ವಿಷಯದಲ್ಲಿ ನಿರ್ಲಕ್ಷೃ ತೋರಿಸುತ್ತಿದ್ದು, ಇದರಿಂದ ಸಾವಿರಾರು ಕೃಷಿ ಪದವೀಧರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪ್ರತಿವರ್ಷ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಕಡ್ಡಾಯವಾಗಿ ನಡೆಸಬೇಕು. ಜತೆಗೆ ರಾಯಿಟೆಕ್ ಕಾಲೇಜುಗಳನ್ನು ರದ್ದುಪಡಿಸುವುದು, ಬಿ.ಇ. ಜೈವಿಕ ತಂತ್ರಜ್ಞಾನ ಕೋರ್ಸ್‌ಗೆ ಅವಕಾಶ ನೀಡದಿರುವುದು, ಕೃಷಿ ವಿದ್ಯಾರ್ಥಿಗಳಿಗೆ ಕ್ರೀಡಾ ಕೋಟಾ ಪರಿಚಯಿಸುವುದು, ಡಿಎಇಎಸ್‌ಐ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಕೃಷಿ ಪದವೀಧರರ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ರಾಜ್ಯದಲ್ಲಿ ಹೊಸ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡದಿರುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಕೃಷಿ ಶಿಕ್ಷಣವನ್ನು ಉಳಿಸಿ, ಉದ್ಯೋಗವನ್ನು ಖಾತ್ರಿಪಡಿಸಿ, ನಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ ಎಂಬ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಾಗಿದೆ. ಶಿಕ್ಷಣವು ವ್ಯವಹಾರವಲ್ಲ, ಅದು ಪ್ರತಿಯೊಬ್ಬರ ಹಕ್ಕು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಫಲಕಗಳನ್ನು ಹಿಡಿದು ಸರ್ಕಾರದ ಗಮನ ಸೆಳೆದರು. ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ವಿದ್ಯಾರ್ಥಿ ಮುಖಂಡರು ಎಚ್ಚರಿಕೆ ನೀಡಿದರು.
ಮಳೆ ಬರುತ್ತಿದ್ದರೂ ವಿದ್ಯಾರ್ಥಿಗಳೂ ಪ್ರತಿಭಟನೆಯಿಂದ ಹಿಂದೆ ಸರಿಯದೆ ಕಾಲೇಜು ಮುಖ್ಯ ದ್ವಾರದ ಗೇಟ್ ಮುಂದೆ ರಸ್ತೆ ಮೇಲೆ ಕುಳಿತು ತಮ್ಮ ಪ್ರತಿಭಟನಾ ಹೋರಾಟ ಮುಂದುವರಿಸಿದರು.
ಪ್ರತಿಭಟನೆಯಲ್ಲಿ ಕೃಷಿ ಪದವೀಧರರು, ವಿದ್ಯಾರ್ಥಿಗಳಾದ ವರ್ಷ, ಮೋಹನ್, ರೋಹಿತ್, ಗಗನಾ, ವಿನಿತಾ, ಉಜ್ವಲ್, ಅರುಣ್ ಕುಮಾರ್, ಚರಣ್ ಇತರರು ಇದ್ದರು.