ಹೋಬಳಿಯ ಕಬ್ಬಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಹಾಗೂ ಬಸವೇಶ್ವರ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು 
ಹಾಸನ

ಸಂಸ್ಕಾರ ಕಲಿತವರು ಎಂದಿಗೂ ದಾರಿ ತಪ್ಪಲ್ಲ

ಹಿರೀಸಾವೆ: ವಿದ್ಯೆ ಕಲಿತವರು ದಾರಿ ತಪ್ಪಬಹುದು, ಆದರೆ ಸಂಸ್ಕಾರ ಕಲಿತವರು ಎಂದಿಗೂ ದಾರಿ ತಪ್ಪಲ್ಲ ಎಂದು ಆದಿಚುಂಚನಗಿರಿ ಹಾಸನ ಕೊಡಗು ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯೆ ಕಲಿತವರು ಒಮ್ಮೊಮ್ಮೆ ದಾರಿ ತಪ್ಪಿ ಭ್ರಷ್ಟರಾಗಬಹುದು. ಆದರೆ, ಮಾತೃಭಾಷೆಯಲ್ಲಿ ಸಂಸ್ಕಾರ ಕಲಿತ ವಿದ್ಯೆ ನಮ್ಮನ್ನು ಬಹಳ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. 1986ರಲ್ಲಿ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಈ ಮೂಲಕ ಮಕ್ಕಳಿಗೆ ಕೃತಿಗಳನ್ನು ರಚನೆ ಮಾಡಲು ಪ್ರೇರೇಪಿಸಿದರು ಎಂದರು.
ಕನ್ನಡ ಭಾಷೆ ಅಮೃತ ಭಾಷೆ, ರಾಜ್ಯದಲ್ಲಿರುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಬೇಕು. ಐಎಎಸ್, ಐಪಿಎಸ್ ಸೇರಿದಂತೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಕನ್ನಡ ಭಾಷೆ ಕಲಿತು, ಕೆಲಸ ಮಾಡಿದಾಗ ಜನರಿಗೆ ಅನುಕೂಲವಾಗುತ್ತದೆ. ಇತ್ತೀಚೆಗೆ ಕೆಲ ನ್ಯಾಯಾಲಯದ ತೀರ್ಪುಗಳು ಕನ್ನಡದಲ್ಲಿ ಬರುತ್ತಿವೆ, ಮುಂದಿನ ದಿನಗಳಲ್ಲಿ ಎಲ್ಲ ಕೋರ್ಟ್‌ಗಳ ಆದೇಶ, ತೀರ್ಪುಗಳು ಸ್ಥಳೀಯ ಭಾಷೆಯಲ್ಲಿ ಬರುವಂತೆ ಅಗಬೇಕು ಎಂದರು.
ಸಾಹಿತಿ ಪ್ರೊ.ಹೊಸೂರು ಎನ್ ತಮ್ಮಣ್ಣಗೌಡ ಮಾತನಾಡಿ, ಮಕ್ಕಳಲ್ಲಿ ಇರುವ ಜ್ಞಾನ ಪರೀಕ್ಷೆಗಳ ಮೂಲಕ ಪ್ರತಿಭೆಯಾಗಿ ಹೊರಬರುತ್ತದೆ. ಮನೆಯಲ್ಲಿ ಹಿರಿಯರು, ಶಾಲೆಯಲ್ಲಿ ಶಿಕ್ಷಕರು ಮತ್ತು ಸಭೆಯಲ್ಲಿ ಗುರುಗಳು ಹೇಳುವುದನ್ನು ಶ್ರದ್ಧೆಯಿಂದ ಕೇಳಿದರೆ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಘಟಕ ಹೋಬಳಿ ಅಧ್ಯಕ್ಷ ಎಚ್.ಎ.ಪ್ರಮೋದ್, ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಪಿ ಶಂಕರ್, ಮಾಜಿ ಅಧ್ಯಕ್ಷ ಎಚ್.ಇ.ಬೋರಣ್ಣ, ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಕಸಾಪ ಪದಾಧಿಕಾರಿಗಳು ಇದ್ದರು.