ಕೆ.ಆರ್.ರಾಜಣ್ಣ 
ಹಾಸನ

ಅಕ್ರಮವಾಗಿ ಭೂ ಮಂಜೂರು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಅಕ್ರಮವಾಗಿ ಭೂ ಮಂಜೂರು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ
  • ದೂರುದಾರ ಕೋಲಾರದ ಕೆ.ಆರ್.ರಾಜಣ್ಣ ಒತ್ತಾಯ
ಹಾಸನ: ಬೇಲೂರು ತಾಲೂಕಿನಲ್ಲಿ ಬಗರ್ ಹುಕುಂ ಸಕ್ರಮ ಸಮಿತಿಯಿಂದ ಅಕ್ರಮವಾಗಿ ಭೂ ಮಂಜೂರು ಮಾಡಿರುವ ಹಗರಣ ತಾರ್ಕಿಕ ಅಂತ್ಯ ಕಂಡಿದ್ದು, ಆದಷ್ಟು ಬೇಗ ತೀರ್ಪು ಹೊರ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ದೂರುದಾರ ಕೋಲಾರದ ಕೆ.ಆರ್.ರಾಜಣ್ಣ ಒತ್ತಾಯಿಸಿದರು.
ಹಗರಣದಲ್ಲಿ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತ್ರವಲ್ಲದೆ, ಐವರು ತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸೇರಿದಂತೆ ಒಟ್ಟು 30 ಮಂದಿ ಭಾಗಿಯಾಗಿದ್ದಾರೆ. ಕೆ.ಎಸ್.ಲಿಂಗೇಶ್ ಸೇರಿದಂತೆ 16 ಜನರನ್ನು ಬಂಧಿಸಲಾಗಿದ್ದು, ಸರ್ಕಾರದ ಜಮೀನು ಮರಳಿ ಬರಬೇಕು ಎಂಬುದೇ ನಮ್ಮ ಹೋರಾಟದ ಉದ್ದೇಶ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬರೋಬ್ಬರಿ 2750 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯವರಿಗೆ ಹಂಚಿಕೆ ಮಾಡಲಾಗಿದೆ. ಆರಂಭದಲ್ಲಿ ನಮ್ಮ ದೂರನ್ನು ಬೇಲೂರು ಪೊಲೀಸರು ದಾಖಲು ಮಾಡಿರಲಿಲ್ಲ. ನಂತರ ನಾವು 42ನೇ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ಮೊರೆ ಹೋದೆವು. ಸ್ಪೆಷೆಲ್ ಕೋರ್ಟ್ ಸೂಚನೆ ನಂತರ 2023 ಜ.23 ರಂದು ದೂರು ದಾಖಲಾಯಿತು. ಆರೋಪಿಗಳು ಜಾಮೀನಿಗೆ ಅರ್ಜಿ ಹಾಕಿದಾಗ ಅಂದಿನ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತಿರಸ್ಕರಿಸಿದರು. ನಂತರ 2024 ರಲ್ಲಿ ಹೈಕೋರ್ಟ್ ಮೊರೆ ಹೋದಾಗ ನ್ಯಾ.ನಾಗಭೂಷಣ್ ನಿರಾಕರಿಸಿದ್ದರು ಎಂದು ತಿಳಿಸಿದರು.
ಇತ್ತೀಚೆಗೆ ತಾತ್ಕಾಲಿಕ ಬೇಲ್ ಅರ್ಜಿಯೂ ತಿರಸ್ಕಾರ ಆದ ನಂತರ ಸಿಐಡಿ ಪೊಲೀಸರು ಲಿಂಗೇಶ್ ಸೇರಿ 16 ಮಂದಿಯನ್ನು ಬಂಧಿಸಿದ್ದಾರೆ. ಕೆಲವೇ ದಿನಗಳಲ್ಲಿ ಸಿಐಡಿ 42ನೇ ವಿಶೇಷ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಲಿದ್ದು, ವಿಚಾರಣೆ ನಂತರ ಆರೋಪಿಗಳಿಗೆ ಶಿಕ್ಷೆ ಆಗುವ ವಿಶ್ವಾಸವಿದೆ ಎಂದರು.
2016 ರಿಂದ 2022ರ ನಡುವೆ ಹಗರಣ ನಡೆದಿದೆ. ಬಗರ್ ಹುಕುಂ ಯೋಜನೆಯಡಿ ಸುಮಾರು 2 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ ಆಗಿದ್ದವು. ಈ ಪೈಕಿ 1430 ಅರ್ಜಿಗಳು ನಕಲಿ ಆಗಿದ್ದು, ಅಷ್ಟೂ ಮಂದಿಗೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಹಗರಣ ಬೆಳಕಿಗೆ ಬಂದ ನಂತರ ಅಂದು ಸಕಲೇಶಪುರ ಉಪ ವಿಭಾಗಾಧಿಯಾಗಿದ್ದ ಪ್ರತೀಕ್ ಬಯಾಲ್ ಎಂಬುವರು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅದರಲ್ಲಿ ಎಷ್ಟೋ ಪ್ರಕರಣಗಳಲ್ಲಿ ನೈಜತೆ ಇಲ್ಲ, ನಿಯಮ ಗಾಳಿಗೆ ತೂರಲಾಗಿದೆ. ಇಷ್ಟೆಲ್ಲ ಲೋಪದೋಷಗಳಿಗೆ ಅಂದು ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್ ಅವರೇ ನೇರಹೊಣೆ ಎಂದು. ಒಟ್ಟಾರೆಯಾಗಿ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳಿಗೆ ಶಿಕ್ಷೆ ವಿಧಿಸಿ, ಸರ್ಕಾರಕ್ಕೆ ಆಗಿರುವ ನಷ್ಟ ಭರಿಸಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕಾಂತ್ ಇದ್ದರು.