ಅರೇಹಳ್ಳಿಯಲ್ಲಿ ಕಣದಲ್ಲಿದ್ದ ಕಾಫಿ ಕಾಯುತಿದ್ದ ವ್ಯಕ್ತಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ ಕಾಫಿ ಬೀಜ ಕದ್ದೊಯ್ದಿರುವ ಸ್ಥಳ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಪಡೆಯುತ್ತಿರುವ  
ಹಾಸನ

ಮಲೀಕನ ಮೇಲೆ ಹಲ್ಲೆ ನಡೆಸಿ ಕಾಫಿ ಕದ್ದೊಯ್ದ ಕಳ್ಳರು

ಎಂ.ರವಿ

ಸರಣಿ ಕಳವು ಪ್ರಕರಣಕ್ಕೆ ಕಡಿವಾಣ ಹಾಕಲು ಬೆಳೆಗಾರರ ಒತ್ತಾಯ

ಬೇಲೂರು: ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅರೇಹಳ್ಳಿಯ ಉಲ್ಲಾಸ ನಗರದಲ್ಲಿ ಗುರುವಾರ ನಸುಕಿನಲ್ಲಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಕಾಯುತ್ತಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿ ಬಂದೂಕಿನೊಂದಿಗೆ, ಕಾಫಿ ಬೀಜ ಕದ್ದೊಯ್ದಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಫಿ ಕಳ್ಳತನವಾಗುತ್ತಿರುವುದನ್ನು ಗಮನಿಸಿದ ಕಾಫಿ ಬೆಳೆಗಾರ ಜಗನ್ನಾಥಶೆಟ್ಟಿ ಎಂಬುವರು ಎಂದಿನಂತೆ ತಮ್ಮ ಕಣದಲ್ಲಿ 25 ಚೀಲದಷ್ಟು ಕಾಫಿ ಬೆಳೆಯನ್ನು ಒಣಗಲು ಹಾಕಿ ಕಾಯುವುದಕ್ಕಾಗಿ ತಮ್ಮ ಓಮ್ನಿ ವ್ಯಾನಿನಲ್ಲಿ ಮಲಗುತಿದ್ದರು. ಆದರೆ ಗುರುವಾರ ನಸುಕಿನ 4 ರಿಂದ 5 ಗಂಟೆ ಸುಮಾರಿನಲ್ಲಿ ನಾಲ್ಕು ಜನರಿದ್ದ ತಂಡದಲ್ಲಿ ಇಬ್ಬರು ಕಣದಲ್ಲಿ ಎರಡು ಚೀಲಗಳಿಗೆ ಕಾಫಿ ತುಂಬುತಿದ್ದರು. ಏನೋ ಶಬ್ದ ಬಂದಂತ್ತಾಗಿ ಜಗನ್ನಾಥಶೆಟ್ಟರು ಕಾಟ್ರೇಜ್ ತುಂಬಿದ್ದ ಡಬಲ್ ಬ್ಯಾರೆಲ್ ಬಂದೂಕಿನೊಂದಿಗೆ ಕಾರಿನಿಂದ ಕೆಳಗಿಳಿದು ಜೋರಾಗಿ ಕೂಗಾಡಲು ಮುಂದಾಗಿದ್ದಾರೆ. ಆದರೆ ನಾಲ್ಕು ಜನರ ಪೈಕಿ ಮತ್ತಿಬ್ಬರು ಕಾರಿನ ಹಿಂಬದಿಯಿಂದ ಜಗನ್ನಾಥ್‌ಶೆಟ್ಟಿಯವರ ತಲೆ, ಕೈ ಮತ್ತು ಪಕ್ಕೆಗೆ ದೊಣ್ಣೆಯಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ.
ನಂತರ ಕಳ್ಳರು ಉರ್ದು ಭಾಷೆಯಲ್ಲಿ ಇವನನ್ನು ಬಿಡಬಾರದು ಎಂದು ಮಾತನಾಡಿಕೊಂಡು ಕಣದಲ್ಲಿದ್ದ ಕಾಫಿ ಬೀಜವನ್ನೆಲ್ಲ ತುಂಬಿಕೊಂಡು ಪಕ್ಕದ ತೋಟದೊಳಕ್ಕೆ ಹೋಗಿದ್ದಾರೆ. ಆದರೆ ಗಾಯಗೊಂಡಿದ್ದ ಜಗನ್ನಾಥಶೆಟ್ಟಿ ಅವರ ಕೂಗಾಟ ಕೇಳಿದ ಅಕ್ಕಪಕ್ಕದವರು ಬಂದು ಗಾಯಗೊಂಡಿದ್ದ ಜಗನ್ನಾಥಶೆಟ್ಟಿ ಅವರನ್ನು ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜೇತಾ, ಅಡಿಷನಲ್ ಎಸ್‌ಪಿ ತಮ್ಮಯ್ಯ ಸೇರಿದಂತೆ ಶ್ವಾನ ದಳ ಮತ್ತು ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರಿಸಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
"

ಇದೇ ಜಗನ್ನಾಥಶೆಟ್ಟಿಯವರ ಮನೆಯ ಮುಂಭಾಗದ ಕಣದಲ್ಲಿ ಹಾಕಿದ್ದ ಕಾಫಿಯನ್ನು ಸೋಮವಾರ ಬೆಳಗ್ಗೆ ಕಳ್ಳರು ಕದ್ದೊಯ್ದಿದ್ದರು. ಆದರೆ ಕಳ್ಳರು ತಾವು ಹಾಕಿದ್ದ ಟೋಪಿ ಮತ್ತು ಶೂ ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿ ತನಿಖೆ ನಡೆಸುವಂತೆ ತಿಳಿಸಿದ್ದೆವು. ಆದರೆ ಪೊಲೀಸರು ಯಾರೂ ಕ್ರಮಕೈಗೊಳ್ಳದ ಕಾರಣ ಗುರುವಾರ ಬೆಳಗ್ಗೆ ಅರೇಹಳ್ಳಿಯಲ್ಲಿ ಕಣದಲ್ಲಿ ಕಾಫಿ ಕಾಯುತಿದ್ದ ಜಗನ್ನಾಥಶೆಟ್ಟರ ಮೇಲೆ ಹಲ್ಲೆ ನಡೆಸಿ ಅವರ ಬಂದೂಕಿನೊಂದಿಗೆ ಕಾಫಿ ಕದ್ದೊಯ್ದಿದ್ದಾರೆ. ಇನ್ನಾದರೂ ಪೊಲೀಸರು ಬಿಗಿ ಕ್ರಮ ಕೈಗೊಂಡು ಕಳ್ಳರಿಗೆ ಕಳ್ಳತನಕ್ಕೆ ಕಡಿವಾಣ ಹಾಕಬೇಕಿದೆ.