ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ನಡೆದ ಹುಂಡಿ ಹಣ ಕಳ್ಳತನ ಪ್ರಕರಣದ ನಂತರ ದೇಗುದಲ್ಲಿ ಮಾತನಾಡುತ್ತಿರುವ ಆಡಳಿತಾಧಿಕಾರಿ ಹಾಗೂ ಸಕಲೇಶಪುರ ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ.  
ಹಾಸನ

ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ

ಬೇಲೂರು: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ನಡೆದ ಹುಂಡಿ ಹಣ ಕಳ್ಳತನ, ಭದ್ರತಾ ವ್ಯವಸ್ಥೆ, ಅನಧಿಕೃತ ಪಾಕಿರ್ಂಗ್, ವಸ್ತ್ರ ಸಂಹಿತೆ ಹಾಗೂ ಪಾರಂಪರಿಕ ವಿಗ್ರಹಗಳ ಸಂರಕ್ಷಣೆ ಕುರಿತು ದೇಗುಲ ಆಡಳಿತಾಧಿಕಾರಿ ಹಾಗೂ ಸಕಲೇಶಪುರ ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಬುಧವಾರ ಸಂಜೆ ದೇವಸ್ಥಾನಕ್ಕೆ ಭೇಟಿ ನಿಡಿದ ಸಂದರ್ಭ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.
ದೇಗುಲ ಆಡಳಿತಾಧಿಕಾರಿ ಹಾಗೂ ಸಕಲೇಶಪುರ ಉಪ ವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಗಿದ ಕೆಲವೇ ಹೊತ್ತಿನಲ್ಲಿ ನಡೆದ ಹಣ ಕಳ್ಳತನದ ಮಾಹಿತಿ ದೊರೆಯುತ್ತಿದ್ದಂತೆಯೇ ದೇಗುಲದ ಇಒ ಯೋಗೇಶ್ ಅವರಿಗೆ ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ ಸೂಕ್ತ ವಸ್ತ್ರ ಸಂಹಿತೆ (ಡ್ರೆಸ್ ಕೋಡ್) ಜಾರಿಗೊಳಿಸುವ ಕುರಿತು ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿ, ಶೀಘ್ರದಲ್ಲೇ ನಿಯಮಾವಳಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೇವಸ್ಥಾನದ ಒಳ ಆವರಣದಲ್ಲಿ ಪಾದರಕ್ಷೆಗಳನ್ನು ಬಿಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಗೈಡ್‌ಗಳು, ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ಎಲ್ಲರೂ ನಿಗದಿತ ಸ್ಥಳದಲ್ಲೇ ಪಾದರಕ್ಷೆಗಳನ್ನು ಬಿಡುವಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ಅಲ್ಲದೆ ವಿಶ್ವ ಪಾರಂಪರಿಕ ತಾಣದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಅಡ್ಡಾದಿಡ್ಡಿ ವಾಹನಗಳ ಪಾಕಿರ್ಂಗ್ ಸಮಸ್ಯೆ ನಿವಾರಣೆಗೆ ಈ ವಾರದೊಳಗೆ ಆಂತರಿಕ ಸಭೆ ನಡೆಸಿ, ಸೂಕ್ತ ಮತ್ತು ಶಾಶ್ವತ ಪರಿಹಾರ ಕೈಗೊಳ್ಳಲಾಗುವುದು. ಇದೇ ವೇಳೆ, ಪಾರಂಪರಿಕ ವಿಗ್ರಹಗಳ ಮೇಲೆ ಪ್ರವಾಸಿಗರು ಹಾಗೂ ಭಕ್ತರು ಕೈ ಇಡುವುದು, ಕಾಲಿಡುವುದು, ಫೋಟೋ ಶೂಟ್ ನಡೆಸುವುದು ಸೇರಿದಂತೆ ಯಾವುದೇ ರೀತಿಯ ಹಾನಿಕಾರಕ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಿನ ವಾರದೊಳಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದರು.