- ಮಹಿಳಾ ಮೀಸಲಾತಿ ಮಸೂದೆಗೆ ವಿರೋಧವಿಲ್ಲ
- ಸಂಸದ ಶ್ರೇಯಸ್ ಪಟೇಲ್ ಹೇಳಿಕೆ
ಹಾಸನ: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕಾಂಗ್ರೆಸ್ ನಾಯಕರು ವಿರೋಧ ಮಾಡಿಲ್ಲ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಕ್ಷೇತ್ರ ಮರುವಿಂಗಡಣೆ ಮಸೂದೆ ತರಲು ಮುಂದಾಗಿದ್ದನ್ನು ನಾವು ವಿರೋಧಿಸಿದ್ದೇವೆ. ಕೇಂದ್ರದವರು ರಾಜ್ಯ ಸರ್ಕಾರದ ಪ್ರತಿನಿಧಿಗಳ ಸಭೆ ನಡೆಸಿಲ್ಲ, ಆದರೂ ನಾವು ವುಮೆನ್ ಬಿಲ್ ವಿರೋಧಿಸಿಲ್ಲ, ಬದಲಾಗಿ ಕ್ಷೇತ್ರ ಮರುವಿಂಗಡಣೆ ಕಾಯ್ದೆ ವಿರೋಧಿಸಿದ್ದೇವೆ. ಬಿಜೆಪಿ ಸಂವಿಧಾನ ತಿದ್ದುಪಡಿ ಮಾಡಲು ಯತ್ನಿಸಿತ್ತು. ಅದಕ್ಕೆ ನಾವು ಅವಕಾಶ ನೀಡಿಲ್ಲ. ಆದರೆ, ಇಂಡಿಯಾ ಕೂಟ ಮಹಿಳಾ ಮೀಸಲಾತಿ ವಿರೋಧಿಸಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಸರ್ವಪಕ್ಷಗಳ ಗಮನಕ್ಕೆ ತಾರದೆ ಮತ್ತೆ ಮಸೂದೆ ತರಲು ಹೊರಟರೆ ನಾವು ಮತ್ತೊಮ್ಮೆ ವಿರೋಧಿಸುತ್ತೇವೆ. 20 ವರ್ಷಕ್ಕೆ ಕ್ಷೇತ್ರ ಮರುವಿಂಗಡಣೆ ಪ್ರಯತ್ನ ಮಾಡಿದ್ದಾರೆ. ವಾಸ್ತವವಾಗಿ 25 ವರ್ಷಕ್ಕೆ ಕ್ಷೇತ್ರ ಮರುವಿಂಗಡಣೆ ಮಾಡಬೇಕಿದೆ. 2026ರ ಜನಗಣತಿ ಮುಗಿದ ನಂತರ ಮಹಿಳಾ ಮೀಸಲಾತಿ ಮಸೂದೆ ಮಾಡಲಿ ಎಂದು ಸಲಹೆ ನೀಡಿದರು.
ಅಲ್ಲದೇ, ವಿಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆ ಮಂಡಿಸಲಿ. ರಾಜೀವ್‌ಗಾಂಧಿ ಕನಸು ನನಸು ಮಾಡೋ ಕೆಲಸ ಮಾಡುತ್ತೇವೆ. ವಿಶೇಷ ಅಧಿವೇಶನ ಕರೆದು ವುಮೆನ್ ಬಿಲ್ ಮಂಡಿಸಿದರೆ ಸಹಮತ ನೀಡುತ್ತೇವೆ ಎಂದು ಹೇಳಿದರು.
ಈ ಮಸೂದೆ ಜಾರಿಗೆ ಮೂಲ ಕಾರಣ ನಮ್ಮ ಪಕ್ಷದ ನಾಯಕರಾದ ದಿ.ರಾಜೀವ್ ಗಾಂಧಿ. ಈ ಕಾಯ್ದೆ 2023ರಲ್ಲೇ ಲೋಕಸಭೆ, ರಾಜ್ಯ ಸಭೆಯಲ್ಲಿ ಚರ್ಚೆ ಆಗಿತ್ತು. ಆದರೀಗ ಮಹಿಳಾ ಮೀಸಲು ನೆಪದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆ ಜಾರಿ ಮಾಡಲು ಹೊರಟಿದ್ದರು. ಸಂವಿಧಾನ ತಿದ್ದುಪಡಿಗೆ 2/3 ಬಹುಮತ ಬೇಕು ಎಂದು ಗೊತ್ತಿದ್ದರೂ, ಈ ಕಾಯ್ದೆ ಜಾರಿಗೆ ಮುಂದಾಗಿದ್ದರು. ಈ ನಡೆಯನ್ನು ನಾವು ವಿರೋಧ ಮಾಡಿದ್ದೇ ಹೊರತು, ನಮ್ಮ ವಿರೋಧ ಮಹಿಳಾ ಮೀಸಲಾತಿಗೆ ಅಲ್ಲ. ಆದರೆ ಬಿಜೆಪಿಯವರು ನಮ್ಮ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ಜಿ.ಬಿ.ಶಶಿಧರ್, ಕೃಷ್ಣಕುಮಾರ್ ಇತರರಿದ್ದರು.