ಕಾಮತಿ ರಸ್ತೆ 
ಹಾಸನ

ಮನಕ್ಕೆ ಮುದ ಕೊಡುವ ಊರಲಿಲ್ಲ ಸೌಕರ್ಯ

ಆಲೂರು: ಮಲೆನಾಡು ಎಂದರೆ ಹೊರಭಾಗದ ಜನರಿಗೆ ಎಲ್ಲಿಲ್ಲದ ಖುಷಿ. ಇಲ್ಲಿನ ಹಳ್ಳ ತೊರೆಗಳು, ಪ್ರಕೃತಿಯ ಸೊಬಗು. ಇದೆಲ್ಲದಕ್ಕೂ ಮನ ಸೋಲದವರಿಲ್ಲ. ಆದರೆ, ಇಲ್ಲಿರುವ ಜನರು ಮೂಲಸೌಕರ್ಯ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮಲೆನಾಡು ಭಾಗದ ಅದೆಷ್ಟೋ ಗ್ರಾಮಗಳಿಗೆ ಇಂದಿಗೂ ಕೂಡ ಆಸ್ಪತ್ರೆ, ಬೀದಿದೀಪ, ರಸ್ತೆ-ಚರಂಡಿ ಹಾಗೂ ಸೇತುವೆಗಳೂ ಇಲ್ಲ. ಇದಕ್ಕೆ ಆಲೂರು ತಾಲೂಕಿನ ಕಾಮತಿ ಕೂಡಿಗೆಯ ಹಳ್ಳಿಗಳು ಸಾಕ್ಷಿಯಾಗಿವೆ.
ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಮತಿ ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಸುಸಜ್ಜಿತ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲದೆ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಆರೋಗ್ಯ ಸೇವೆಗಾಗಿ ಆಸ್ಪತ್ರೆ ಇಲ್ಲದೆ ತುರ್ತು ಆರೋಗ್ಯ ಸಮಸ್ಯೆ ಎದುರಾದಲ್ಲಿ ಆತಂಕಪಡುವಂತಾಗುತ್ತದೆ. ರಸ್ತೆಬದಿ ಬೀಳುವ ಹಂತದಲ್ಲಿರುವ ಮರಗಳು, ಕೆಟ್ಟು ನಿಂತಿರುವ ಹೈಮಾಸ್ಟ್ ದೀಪ ಹಾಗೂ ನನೆಗುದಿಗೆ ಬಿದ್ದಿರುವ ಬಸ್ ನಿಲ್ದಾಣದ ಕಾಮಗಾರಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮೂಲಸೌಕರ್ಯಗಳ ಕೊರತೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜನ ಬೇಸತ್ತಿದ್ದಾರೆ.
ಗ್ರಾಮಸ್ಥರು ಮಳೆಗಾಲ ಸಂದರ್ಭ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸಪಡಬೇಕು. ಮಳೆಗಾಲದಲ್ಲಿ ರಸ್ತೆ ಗುಂಡಿಯಲ್ಲಿ ನೀರು ತುಂಬಿ ರಸ್ತೆ ಯಾವುದು? ಗುಂಡಿ ಯಾವುದು? ತಿಳಿಯದೆ ವಾಹನಗಳು ಅಪಘಾತಕ್ಕೀಡಾಗುವ ಅಪಾಯ ಹೆಚ್ಚು. ಅಲ್ಲದೆ ನೆಟ್‌ವರ್ಕ್ ಸಮಸ್ಯೆ ಸಹ ಇಲ್ಲಿ ಪ್ರಮುಖವಾಗಿದೆ. ತುರ್ತು ಸಂದರ್ಭಗಳಲ್ಲಿ ೆನ್ ಸಂಪರ್ಕ ಸಾಧ್ಯವಾಗದೆ ಆತಂತಕ್ಕೊಳಗಾಗುವ ಸನ್ನೀವೇಶ ಸಾಮಾನ್ಯವಾಗಿವೆ.