ಹಾಸನ ನಗರದ ಕ್ರೈಸ್ಟ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಹೆಮ್ಮಿಗೆ ಮೋಹನ್, ಕೆ.ಟಿ.ಜಯಶ್ರೀ, ಜಯಪ್ರಕಾಶ್, ರಿಜೋ ಥಾಮಸ್ ಇತರರಿದ್ದರು.
- ದೇಶದಲ್ಲಿ ಒಂದು ಮಿಲಿಯನ್ ಯೂನಿಟ್ ರಕ್ತದ ಕೊರತೆ
- ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಪ್ರಾಂತಪಾಲ ಹೆಮ್ಮಿಗೆ ಮೋಹನ್ ಹೇಳಿಕೆ
ಹಾಸನ: ದೇಶದಲ್ಲಿ ಸುಮಾರು ಒಂದು ಮಿಲಿಯನ್ ಯೂನಿಟ್‌ಗಳಷ್ಟು ರಕ್ತದ ಕೊರತೆ ಇದೆ. ದೇಶದ ಜನಸಂಖ್ಯೆಯಲ್ಲಿ ಶೇಕಡ 1ರಷ್ಟು ಜನರು ವರ್ಷಕ್ಕೊಮ್ಮೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರೆ ದೇಶದಲ್ಲಿ ಎದುರಾಗಿರುವ ರಕ್ತದ ಕೊರತೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಸನ ಜಿಲ್ಲಾ ಶಾಖೆಯ ಪ್ರಾಂತಪಾಲ ಹೆಮ್ಮಿಗೆ ಮೋಹನ್ ಹೇಳಿದರು.
ನಗರದ ಕ್ರೈಸ್ಟ್ ಸ್ಕೂಲ್‌ನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾಸನ, ಕ್ರೈಸ್ಟ್ ಸ್ಕೂಲ್ ಹಾಗೂ ಕಿರಿಯ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಮಾನವೀಯ ಕಾರ್ಯವಾಗಿದ್ದು, ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು. ನಿಯಮಿತ ರಕ್ತದಾನದಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುವುದರ ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಅನೇಕ ಪ್ರಯೋಜನಗಳಿವೆ ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕಿ ಕೆ.ಟಿ.ಜಯಶ್ರೀ ಮಾತನಾಡಿ, ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಗುಣ, ಸಮಾಜಸೇವೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿರ್ದೇಶಕ ಜಯಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜದತ್ತ ತಮ್ಮ ಜವಾಬ್ದಾರಿಯನ್ನು ಅರಿತು ಬದುಕು ರೂಪಿಸಿಕೊಳ್ಳಬೇಕು ಎಂದರು.
ಬಿ.ಆರ್.ಉದಯ್ ಕುಮಾರ್ ಹಾಡಿನ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುವ ಸಂದೇಶವನ್ನು ಮನರಂಜನಾತ್ಮಕವಾಗಿ ನೀಡಿದರು.
ಅಧ್ಯಕ್ಷತೆಯನ್ನು ಕ್ರೈಸ್ಟ್ ಸ್ಕೂಲ್‌ನ ಆಡಳಿತಾಧಿಕಾರಿ ರಿಜೋ ಥಾಮಸ್ ವಹಿಸಿದ್ದರು.
ಶಿಬಿರದಲ್ಲಿ ಡಾಕ್ಟರ್ ಅಗರವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣೆ, ವಿ ಕೇರ್ ಆಸ್ಪತ್ರೆ ವತಿಯಿಂದ ದಂತ ತಪಾಸಣೆ ಹಾಗೂ ಎನ್‌ಸಿಡಿ ತಂಡದಿಂದ ರಕ್ತದೊತ್ತಡ (ಬಿ.ಪಿ.), ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ 20 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದು, ಅವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. 360ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.