ಸ್ವರೂಪ್ ಪ್ರಕಾಶ್ 
ಹಾಸನ

ಮಾರ್ಚ್ ಅಂತ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣ

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್ ಅಂತ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣ
  • ಶಾಸಕ ಎಚ್.ಪಿ.ಸ್ವರೂಪ್ ಪ್ರಶ್ನೆಗೆ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್ ಉತ್ತರ
ಹಾಸನ: ನಗರದ ಹೃದಯ ಭಾಗದಲ್ಲಿ ಅರ್ಧಕ್ಕೆ ನಿಂತು ಈಗ ಮತ್ತೆ ಆರಂಭವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿವಿಲ್ ಕಾಮಗಾರಿಯನ್ನು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ವಿಶೇಷ ಅಧಿವೇಶನದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ 2018-19ನೇ ಸಾಲಿನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಆರಂಭವಾಯಿತು. 2025 ಸೆ.22ರಲ್ಲಿ ಕಾಮಗಾರಿ ಮೊತ್ತ 63.34 ಕೋಟಿ ರೂ.ಗಳಿಗೆ ಪರಿಷ್ಕೃತಗೊಂಡಿದೆ. ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. 2026 ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
2025ರ ಡಿ.9ರಂದು ಸದರಿ ಆಸ್ಪತ್ರೆ ಕಟ್ಟಡಕ್ಕೆ ಅಗತ್ಯ ಸರ್ವೀಸ್ ಕಾಮಗಾರಿಗೆ 21 ಕೋಟಿ ರೂ. ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಉಳಿದಂತೆ 250 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ ಮೊದಲ ಹಂತದಲ್ಲಿ 150 ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಡಿಯಾಲಜಿ, ನ್ಯೂರಾಲಜಿ, ನ್ಯೂರೋಸರ್ಜರಿ, ಯೂರಾಲಜಿ, ಕಾರ್ಡಿಯೊಥೋರಾಸಿಕ್ ಸರ್ಜರಿ ವಿಭಾಗ ಮತ್ತು ಕ್ಯಾತ್ಲ್ಯಾಬ್ ಯೂನಿಟ್ ಆರಂಭಿಸಲು ಅಗತ್ಯವಿರುವ ಉಪಕರಣ ಸೇರಿ ಒಟ್ಟು 2392.95 ಲಕ್ಷ ರೂ. ಅಂದಾಜು ಮೊತ್ತಕ್ಕೆ 2025ರ ಡಿ.9 ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಆದೇಶದಲ್ಲಿ ಕ್ಯಾತ್ಲ್ಯಾಬ್ ಕಾರ್ಡಿಯಾಕ್ ಯೂನಿಟ್ ಆರಂಭಿಸಲು 942 ಲಕ್ಷ ರೂ.ಗಳಿಗೆ ಅನುಮೋದನೆಯಾಗಿದೆ ಹಾಗೂ ಆಸ್ಪತ್ರೆಗೆ ಅಗತ್ಯವಿರುವ ಹುದ್ದೆಗಳ ಸೃಜನೆ ಮಾಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಜನಸಾಮಾನ್ಯರ ಚಿಕಿತ್ಸೆಗಾಗಿ ಸದರಿ ಆಸ್ಪತ್ರೆಯನ್ನು ಯಾವಾಗಿನಿಂದ ಕಾರ್ಯಾರಂಭ ಮಾಡುವಿರಿ ಎಂಬ ಶಾಸಕರ ಪ್ರಶ್ನೆಗೆ, ಅಗತ್ಯವಿರುವ ಸರ್ವೀಸ್‌ಗಳು, ವೈದ್ಯಕೀಯ ಉಪಕರಣಗಳನ್ನು ಅಳವಡಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ವಿವಿಧ ಹುದ್ದೆಗಳನ್ನು ಸೃಜನೆ ಮಾಡಿದ ನಂತರ ಆದಷ್ಟು ಶೀಘ್ರವೇ ಕಾರ್ಯಾರಂಭ ಮಾಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಮುರಾರ್ಜಿ ವಸತಿ ಶಾಲೆ ಸದ್ಯಕ್ಕಿಲ್ಲ
ಇದೇ ವೇಳೆ ತಾಲೂಕಿನ ಸಾಲಗಾಮೆ ಹೋಬಳಿಯ ನಿಟ್ಟೂರಿನಲ್ಲಿ ನೂತನವಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ ಎಂಬ ಶಾಸಕರ ಪ್ರಶ್ನೆಗೆ, ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉತ್ತರ ನೀಡಿದ್ದಾರೆ.
ಏಕೆಂದರೆ ಈಗಾಗಲೇ ಕಸಬಾ ಹೋಬಳಿಯಲ್ಲೇ ಗುಡ್ಡೇನಹಳ್ಳಿಯಲ್ಲಿ ಮುರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜು ಹಾಗೂ ಯಗಚಿಯಲ್ಲಿ ಮುರಾರ್ಜಿ ವಸತಿ ಇದೆ ಎಂದಿದ್ದಾರೆ. ಹಾಗಿದ್ದರೆ ಯಾವ ಸಾಲಿನಲ್ಲಿ ವಸತಿ ಶಾಲೆ ಆಗಲಿದೆ ಎಂಬ ಪ್ರಶ್ನೆಗೆ, ಪ್ರತಿ ಹೋಬಳಿಗೆ ಒಂದೊಂದು ಹೋಬಳಿಗಳಲ್ಲಿ ವಸತಿ ಶಾಲೆ ನಿರ್ಮಾಣ ಮಾಡಬೇಕೆಂಬ ಉದ್ದೇಶ ಸರ್ಕಾರದ ಮುಂದಿದೆ. ಅದರಂತೆ ರೆಸಿಡೆನ್ಸಿ ಶಾಲೆ ಇಲ್ಲದ ಹೋಬಳಿಗಳಲ್ಲಿ ಆರಂಭಿಸಲು ಆದ್ಯತೆ ಮೇರೆಗೆ ಹಂತ ಹಂತವಾಗಿ ಗಮನ ಹರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.