ಹಾಸನ ನಗರದ ಕಾಫಿ ಮಂಡಳಿ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕಾಫಿಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಉತ್ಕೃಷ್ಟ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಸಿಇಒ ಕುಮಾರ್ ರಾವ್, ಸೆಂಟಲ್ ಕುಮಾರ್ ಇತರರಿದ್ದರು.
- ರಾಜ್ಯ ಸರ್ಕಾರ ಕಾಫಿ ಬೆಳೆಗೆ ಉತ್ತೇಜನ ನೀಡಲಿ
- ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಆಶಯ
- ಪರಿಸರ ಸ್ನೇಹಿ ತಂತ್ರಜ್ಞಾನ ಉತ್ಕೃಷ್ಟ ಕೇಂದ್ರಕ್ಕೆ ಚಾಲನೆ
ಹಾಸನ: ಕಾಫಿ ಮಂಡಳಿಯ ಬೆಳವಣಿಗೆಗೆ ಕಾಫಿ ಬೆಳೆಗಾರರು ಹಾಗೂ ಬೆಳೆಗಾರರ ಸಂಘಟನೆಗಳು ಕೈ ಜೋಡಿಸಿದಾಗ ಯಶಸ್ಸು ಸಾಧಿಸಬಹುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದರು.
ನಗರದ ಕಾಫಿ ಮಂಡಳಿ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಕಾಫಿಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಉತ್ಕೃಷ್ಟ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕಾಫಿ ಮಂಡಳಿಗಳಲ್ಲಿ 28 ವರ್ಷದ ನಂತರ ಸಿಬ್ಬಂದಿ ನೇಮಕವಾಗಿದೆ. ಸಿಬ್ಬಂದಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಫಿ ಮಂಡಳಿ ಏನು ಮಾಡುತ್ತಿದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದು ಸರ್ಕಾರದ ಮಂಡಳಿಯಲ್ಲ ನಮ್ಮ ಮಂಡಳಿ ಎಂಬ ಭಾವನೆ ಜನರಲ್ಲಿ ಮೂಡಬೇಕು ಎಂದರು.
ರಾಜ್ಯ ಸರ್ಕಾರ ಕಾಫಿ ಬಗ್ಗೆ ಗಮನಹರಿಸಿ ಉತ್ತೇಜನ ನೀಡಬೇಕು. ಬೆಂಗಳೂರಿನಲ್ಲಿ ನಮ್ಮದೇ ಆದ ಕೇಂದ್ರ ಹಾಗೂ ಕ್ಯಾಂಪಸ್ ನಿರ್ಮಾಣ ಆಗಬೇಕು. ಕಾಫಿಗೆ ಉತ್ತೇಜನ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರನ್ನು ಕ್ಯಾಪಿಟಲ್ ಸಿಟಿ ಮಾಡಿಕೊಳ್ಳಬೇಕು, ಈ ಸಲುವಾಗಿ ಸರ್ಕಾರ ಜಾಗ ಒದಗಿಸಿಕೊಡಬೇಕೆಂದರು.
ಕಾಫಿ ಮಂಡಳಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುತ್ತಿದೆ. ಕಾಫಿ ಇಳುವರಿ ಬರಲು ರಾಸಾಯನಿಕ ಅಗತ್ಯ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಕಾಫಿ ಉತ್ಪಾದನೆಯಿಂದ 12 ಸಾವಿರ ಕೋಟಿ ರೂ. ಆದಾಯ ರಾಜ್ಯಕ್ಕೆ ಲಭಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತೇಜನ ನೀಡಬೇಕು. ಕಾಫಿ ಬೆಳೆಗಾರರು ಮಂಡಳಿಯಿಂದ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾಫಿ ಮಂಡಳಿ ಸಿಇಒ ಕುಮಾರ್‌ರಾವ್ ಮಾತನಾಡಿ, ಕಾಫಿಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಉತ್ಕೃಷ್ಟ ಕೇಂದ್ರ ಉದ್ಘಾಟನೆಯಾಗುತಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಕೇಂದ್ರ ಮಾದರಿ ಸೆಂಟರ್ ಆಗಬೇಕು. ಈ ನಿಟ್ಟಿನಲ್ಲಿ ಮಂಡಳಿ ಹಾಗೂ ಬೆಳೆಗಾರರು ಗಮನಹರಿಸಬೇಕು. ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದರೆ ಯಶಸ್ವಿಯಾಗಲು ಸಾಧ್ಯ ಎಂದರು.
ಕಾಫಿ ಮಂಡಳಿ ಜಂಟಿ ನಿರ್ದೇಶಕ ಸೆಂತಲ್‌ಕುಮಾರ್ ಮಾತನಾಡಿ, ಕಾಫಿ ಗಿಡಗಳಿಗೆ ಔಷಧೋಪಚಾರ ಮಾಡಲು ಕಷ್ಟ ಎನ್ನುವ ಕಾಲಘಟ್ಟದಲ್ಲಿ ಬೆಳೆಗಾರರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಯಲ್ಲಿ ಕೆಮಿಕಲ್ ಅಂಶ ಕಂಡು ಬಂದಿರುವುದಾಗಿ ಹೇಳಿದ್ದಾರೆ. ಈ ಯೋಜನೆಯಿಂದ ಕಡಿಮೆ ಔಷಧೋಪಚಾರ ಹಾಗೂ ಕಡಿಮೆ ಖರ್ಚು ಬೆಳೆಗಾರರಿಗೆ ತಗುಲಲಿದೆ. ಪರಿಸರಕ್ಕೆ ಪೂರಕವಾಗಿ ಕಾಫಿ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ತೆರೆಯಲಾಗಿದ್ದು, ಬೆಳೆಗಾರರ ಬೇಡಿಕೆಗೆ ಪೂರಕವಾಗಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.
ಸಕಲೇಶಪುರ ತಾಲೂಕು ಎಸ್‌ಎಲ್‌ಒ ರಂಜಿತ್ ಕುಮಾರ್ ಕೇಂದ್ರದ ಕಾರ್ಯವೈಖರಿ ಹಾಗೂ ಅದರಿಂದ ಬೆಳೆಗಾರರಿಗೆ ಆಗುವ ಉಪಯೋಗಗಳ ಬಗ್ಗೆ ವಿವರಿಸಿ ಕಾಫಿ ಕಾಂಡ ಕೊರಕ, ಕಾಫಿ ಕಾಯಿ ಕೊರಕ ನಿಯಂತ್ರಣದ ಕುರಿತು ಹಾಗೂ ರೆಕ್ಕೆ ಬೋರರ್, ರೋಗ ನಿಯಂತ್ರಣಗಳ ಬಗ್ಗೆ ವಿವರಿಸಿದರು.
ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು ಇದ್ದರು.