ಹಾಸನ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಆಯೋಜಿಸಿದ್ದ ಸಮಾಜ ಕಾರ್ಯ ಗ್ರಾಮೀಣ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ್, ಡಾ.ಎಸ್.ಜಿ. ಮಹೇಶ್, ಕುಮಾರ್ ಇತರರಿದ್ದರು.
- ಗ್ರಾಮ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಪ್ರಮುಖ
- ಪಿಡಿಒ ತನ್ವೀರ್ ಸಲಹೆ
ಹಾಸನ: ಒಂದು ಗ್ರಾಮ ಅಭಿವೃದ್ಧಿ ಆಗಬೇಕಾದರೆ ಯುವಕರ ಪಾತ್ರ ಬಹಳ ಪ್ರಮುಖವಾಗಿದ್ದು, ಸಮುದಾಯದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ನಿಟ್ಟೂರು ಗ್ರಾಮ ಪಂಚಾಯಿತಿಯ ಪಿಡಿಒ ತನ್ವೀರ್ ಸಲಹೆ ನೀಡಿದರು.
ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಹಾಸನ ವಿಶ್ವವಿದ್ಯಾಲಯ ಹೇಮಗಂಗೋತ್ರಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಏಳು ದಿನಗಳ ಸಮಾಜ ಕಾರ್ಯ ಗ್ರಾಮೀಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಗೆ ಮೂಲವಾಗಿದೆ. ಸಮಾಜ ಸೇವೆ, ಸ್ವಚ್ಛತೆ ಮತ್ತು ಶಿಕ್ಷಣದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬದಲಾವಣೆ ತರಲು ಯುವಜನರು ಪ್ರಮುಖ ಪಾತ್ರ ವಹಿಸಬೇಕು ಎಂದರು.
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆ ಬೆಳೆಸಲು ಕುಟುಂಬ ಹಾಗೂ ಸಮುದಾಯ ಎರಡೂ ಸಮಾನ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಣ್ಣ ಕಥೆಗಳ ಮೂಲಕ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸುವ ಅಗತ್ಯವಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳಲ್ಲಿ ಬದಲಾವಣೆ ಆಗುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಶಿಬಿರದ ನಿರ್ದೇಶಕ ಡಾ.ಎಸ್.ಜಿ. ಮಹೇಶ್ ಮಾತನಾಡಿ, ಶಿಬಿರಾರ್ಥಿಗಳು ಏಳು ದಿನಗಳ ಕಾಲ ಗ್ರಾಮದಲ್ಲಿ ವಿವಿಧ ಸೇವಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ ಎಂದು ವಿವರಿಸಿದರು. ಸ್ವಚ್ಛತಾ ಅಭಿಯಾನ, ಆರೋಗ್ಯ ತಪಾಸಣೆ, ಪರಿಸರ ಜಾಗೃತಿ, ಸಾಮಾಜಿಕ ಸಮೀಕ್ಷೆ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಅರಿವು, ಶಿಕ್ಷಣ ಜಾಗೃತಿ, ಗ್ರಾಮೀಣ ಸಮಸ್ಯೆಗಳ ಅಧ್ಯಯನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿರಿಯ ಪ್ರಾಥಮಿಕ ಪಾಠಶಾಲೆ ಸಿ. ಹೊಸೂರಿನ ಎಸ್ಡಿಎಂಸಿ ಅಧ್ಯಕ್ಷ ಕುಮಾರ್ ಮಾತನಾಡಿದರು. ಪ್ರಮುಖರಾದ ಸಿಂಧು, ಎಚ್.ಎಂ.ಪ್ರೀತಂ, ವಿದ್ಯಾರ್ಥಿಗಳು, ಗ್ರಾಮಸ್ಥರು, ಶಿಕ್ಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.