ಸಕಲೇಶಪುರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು. ಕ್ಯಾಮನಹಳ್ಳಿ ರಾಜ್, ಅಗ್ನಿ ಸೋಮಶೇಖರ್, ಮಧು ಬೊಮ್ಮನಕೆರೆ, ರಾಮಚಂದ್ರ ಇತರರು ಇದ್ದರು.
- ಶಾಸಕ ಸಿಮೆಂಟ್ ಮಂಜು ಸಲಹೆ
- ಜನಜಾಗೃತಿ ಮೂಡಿಸಲು ಬಿಜೆಪಿ ಕಾರ್ಯಕರ್ತರಿಗೆ ಕರೆ
ಸಕಲೇಶಪುರ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಹೆಸರಿನಲ್ಲಿ ಯಾವುದೇ ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದ ಮೂಲ ಆಧಾರವಾದ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ವ್ಯಕ್ತಿಯ ಹೆಸರು ಕೈಬಿಡದಂತೆ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಿ, ಪ್ರತಿಯೊಬ್ಬ ಮತದಾರ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಲು ನೆರವಾಗಬೇಕು. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಷ್ಕರಣೆ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು ಹಾಗೂ ಹೊಸ ಅರ್ಹ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ವಿಶೇಷವಾಗಿ ಯುವ ಮತದಾರರು, ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಎಸ್‌ಐಆರ್ ಕುರಿತು ಮಾಹಿತಿ ನೀಡಿ, ಯಾವುದೇ ಅರ್ಹ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪಕ್ಷದ ಕಾರ್ಯಕರ್ತರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮತದಾರರ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಪಕ್ಷದ ಸಂಘಟನಾ ಶಕ್ತಿಯನ್ನು ಬಳಸಿಕೊಂಡು ಎಸ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾಮನಹಳ್ಳಿ ರಾಜ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅಗ್ನಿ ಸೋಮಶೇಖರ್ ಹಾಗೂ ಮಧು ಬೊಮ್ಮನಕೆರೆ, ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ, ಬಿಜೆಪಿ ಮುಖಂಡರಾದ ಧರ್ಮಪ್ಪ, ಮಿಲಿಟರಿ ಚಂದ್ರಣ್ಣ, ಆನಂದ್ ಲಿಯೋ, ಸತ್ಯನಾರಾಯಣ, ಮಹೇಶ್, ಪುರಸಭೆ ಮಾಜಿ ಸದಸ್ಯರಾದ ವನಜಾಕ್ಷಿ ಹಾಗೂ ರೇಖಾ ರುದ್ರಕುಮಾರ್, ಬಿಜೆಪಿ ಮುಖಂಡ ಪ್ರದೀಪ್, ವಾರ್ಡ್-17ರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಶೆಟ್ಟಿ ಸೇರಿದಂತೆ ವಿವಿಧ ವಾರ್ಡ್‌ಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.