ಬೇಲೂರು ತಾಲೂಕಿನ ರಣಘಟ್ಟ ಗ್ರಾಮದ ಬಳಿ ಯಗಚಿ ನದಿಗೆ ನಿರ್ಮಿಸಿರುವ ಆಧುನಿಕ ಚೆಕ್ ಡ್ಯಾಂ. 
ಹಾಸನ

ಕುಂಟುತ್ತ ಸಾಗಿದೆ ರಾಜಕಾಲುವೆ ಕಾಮಗಾರಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ ದೋರಸಮುದ್ರ ಕೆರೆಗೆ ನೀರು ಹರಿಸಬೇಕೆಂಬ ಉದ್ದೇಶ
  • ನಿರೀಕ್ಷಿತ ವೇಗ ಪಡೆದುಕೊಂಡು ಸಾಕಾರವಾಗುವುದೇ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ
ಹಳೇಬೀಡು: ಹೋಬಳಿಯ ಐತಿಹಾಸಿಕ ದೋರಸಮುದ್ರ ಕೆರೆಗೆ ನೀರು ಹರಿಸಬೇಕೆಂಬ ಉದ್ದೇಶದಿಂದ ರೂಪಿಸಲಾದ ರಣಘಟ್ಟ ರಾಜಕಾಲುವೆ ಮರು ನಿರ್ಮಾಣ ಯೋಜನಾ ಕಾಮಗಾರಿಯು ಕುಂಟುತ್ತ ಸಾಗಿದ್ದು, ನಿರೀಕ್ಷಿತ ವೇಗ ಪಡೆದುಕೊಂಡು ಸಾಕಾರವಾಗುವುದೇ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
2016ರಲ್ಲಿ ತಾತ್ವಿಕ ಅನುಮೋದನೆ ಪಡೆದುಕೊಂಡ ಮಹತ್ವಾಕಾಂಕ್ಷೆಯ ರಣಘಟ್ಟ ರಾಜಕಾಲುವೆ ಮರು ನಿರ್ಮಾಣ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ 150 ಕೋಟಿ ರೂ.ಗಳ ಅಂದಾಜು ವೆಚ್ಚದ ಕಾಮಗಾರಿ ನಡೆಸಲು ಇಂಜಿನಿಯರ್‌ಗಳ ಸಲಹೆಯಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯಗಚಿ ಏತ ನೀರಾವರಿ ಯೋಜನೆಯ ವೈಫಲ್ಯಗಳನ್ನು ಗಮನದಲ್ಲಿರಿಸಿಕೊಂಡು ಪ್ರಸಕ್ತ ಯೋಜನೆಯನ್ನು ವೈಜ್ಞಾನಿಕವಾಗಿ ಜಾರಿಗೊಳಿಸಲು ವಿವಿಧೆಡೆಯಿಂದ ಒತ್ತಡ ಹಾಕಲಾಗಿತ್ತು.
ಅದರ ಪರಿಣಾಮ 2018ರ ಬಜೆಟ್‌ನಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಯೋಜನೆಯ ಕಾಮಗಾರಿಗೆ 100 ಕೋಟಿ ರೂ. ಹಣವನ್ನು ಮೀಸಲಿಡುವ ಬಗ್ಗೆ ಘೋಷಿಸಿ ಹಣಕಾಸು ಇಲಾಖೆಯ ಒಪ್ಪಿಗೆಯನ್ನೂ ಪಡೆದಿತ್ತು. ಆರಂಭದಲ್ಲಿ ಕಾಲುವೆ ನಿರ್ಮಾಣದ ಕಾಮಗಾರಿಯು ವೇಗವಾಗಿ ನಡೆದರೂ, ಕ್ರಮೇಣ ನಿಧಾನಗತಿಯಲ್ಲಿ ಮುಂದುವರಿದಿತ್ತು. ಪ್ರಸ್ತುತ ಭೂಸ್ವಾಧೀನ ಹಾಗೂ ಸುರಂಗ ಕೊರೆಯವಾಗಿನ ಸಮಸ್ಯೆಗಳಿಂದ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ. ಸರ್ಕಾರವು ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಬೇಕಿರುವ ಹೆಚ್ಚುವರಿ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡುವುದೇ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ.
ಪ್ರಾಚೀನ ರಾಜಕಾಲುವೆ: ಹೊಯ್ಸಳ ರಾಜರು ದೋರಸಮುದ್ರವನ್ನು (ಹಳೇಬೀಡು)ವನ್ನು ರಾಜಧಾನಿ ಮಾಡಿಕೊಂಡು ಸುಮಾರು 250 ವರ್ಷ ಆಳ್ವಿಕೆ ನಡೆಸಿದ್ದರು. ಆ ಸಮಯದಲ್ಲಿ ನೀರಿನ ವ್ಯವಸ್ಥೆಗಾಗಿ ಬೇಲೂರು ಸಮೀಪದ ರಣಘಟ್ಟ ಎಂಬ ಗ್ರಾಮದ ಬಳಿ ಹರಿಯುತ್ತಿದ್ದ ಸೋಮವತೀ(ಇಂದಿನ ಯಗಚಿ) ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ, ಆ ಜಾಗಕ್ಕೆ ಇತರ ಕೆರೆಗಳಿಂದ ಹರಿದು ಬರುತ್ತಿದ್ದ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದರು. ಹಾಗೆ ಸಂಗ್ರಹವಾದ ನೀರನ್ನು ತಗ್ಗು ಪ್ರದೇಶದಲ್ಲಿದ್ದ ದೋರಸಮುದ್ರ ಕೆರೆಗೆ ಹರಿಸುವ ಸಲುವಾಗಿ ಸುಮಾರು 9 ಕಿ.ಮೀ ದೂರ ಸುಸಜ್ಜಿತ ಕಾಲುವೆಯನ್ನೂ ನಿರ್ಮಿಸಿದ್ದರು. ಕಾಲಾಂತರದಲ್ಲಿ ಹೊಯ್ಸಳರು ನಿರ್ಮಿಸಿದ್ದ ಒಡ್ಡು ಶಿಥಿಲವಾಗಿ ನಾಶವಾಗಿತ್ತಲ್ಲದೆ, ರಾಜಕಾಲುವೆಯೂ ಮುಚ್ಚಿಹೋಗಿ ಪ್ರಸ್ತುತ ಅದರ ಮೇಲೆ ಕೆಲ ಗ್ರಾಮಗಳೂ ಇಂದು ನಿರ್ಮಾಣವಾಗಿವೆ. ಆದರೂ ಸುಸ್ಥಿತಿಯಲ್ಲಿದ್ದ 6 ಕಿ.ಮೀ. ದೂರದ ಕಾಲುವೆಯನ್ನು ಪುನಶ್ಚೇತನಗೊಳಿಸಿ ಅಗತ್ಯವಿರುವೆಡೆ ಸುರಂಗ ಮಾರ್ಗ ನಿರ್ಮಿಸಿ ಗುರುತ್ವ ಬಲದ ಆಧಾರದಲ್ಲಿ ಹಳೇಬೀಡು ಕೆರೆಗೆ ನೀರು ಹರಿಸುವ ಯೋಜನೆ ಇದಾಗಿದೆ.
ಅಡಚಣೆಗಳಿಗೆ ಬಹುತೇಕ ಪರಿಹಾರ; ರಣಘಟ್ಟ ಬಳಿಯ ಯಗಚಿ ನದಿ ನೀರು ಸಂಗ್ರಹಣಾ ಸ್ಥಳದಲ್ಲಿ 2017-18 ರ ಕ್ರಿಯಾಯೋಜನೆಯಲ್ಲಿ 80 ಲಕ್ಷ ರೂ.ವೆಚ್ಚದಲ್ಲಿ ಹೊಸದಾಗಿ ಚೆಕ್ ಡ್ಯಾಂ ನಿರ್ಮಿಸಲಾಗಿದ್ದು ನೀರು ಸಂಗ್ರಹಣೆ ಮಾಡಲಾಗುತ್ತಿದೆ. ರಾಜಕಾಲುವೆ ಮೂಲಕ ಆ ನೀರನ್ನು ಹಳೇಬೀಡು ಕೆರೆಗೆ ಹರಿಸಲು ಉದ್ಭವಿಸಿದ್ದ ಅನೇಕ ತಾಂತ್ರಿಕ ಹಾಗೂ ಭೌಗೋಳಿಕ ಅಡಚಣೆಗಳನ್ನು ಬಹುತೇಕ ಪರಿಹರಿಸಲಾಗಿದೆ. ಅಡ್ಡಿ ಆತಂಕಗಳ ನಿವಾರಣೆ ಹಾಗೂ ಕಾಲುವೆಯ ಸಮಗ್ರ ಪುನಶ್ಚೇತನಕ್ಕಾಗಿ 150 ಕೋಟಿ ರೂಗಳ ಯೋಜನಾ ವೆಚ್ಚದ ಕಾಮಗಾರಿಯನ್ನು ನಡೆಸಲು ಸಲ್ಲಿಸಿದ್ದ ಬೇಡಿಕೆಗೆ 2018ರ ರಾಜ್ಯ ಬಜೆಟ್‌ನಲ್ಲಿ 100 ಕೋಟಿ ನೀಡಿದಾಗ ಸ್ಥಳೀಯರು, ರೈತರು ಹಾಗೂ ಯೋಜನೆಗಾಗಿ ಆಗ್ರಹಿಸಿದ್ದ ವಿವಿಧ ಮಠಾಧೀಶರು ಸಂತಸ ವ್ಯಕ್ತಪಡಿಸಿದ್ದರು. ಬದಲಾದ ಸರ್ಕಾರ ಹಾಗೂ ಪರಿಸ್ಥಿತಿಯಲ್ಲಿ ಮೂಲರೂಪದಲ್ಲೇ ಯೋಜನೆಯ ಕಾಮಗಾರಿ ಮುಗಿದು ಕೆರೆಗೆ ನೀರು ಹರಿಯುವುದೇ ಎಂದು ಜನತೆ ಕಾದುನೋಡುತ್ತಿದ್ದಾರೆ.
ಶಾಸಕನಾಗುವುದಕ್ಕೂ ಮುನ್ನವೇ ರಣಘಟ್ಟ ಯೋಜನೆಯ ಬಗ್ಗೆ ಸಾಕಷ್ಟು ಹೋರಾಟ ನಡೆಸಿದ್ದೇವೆ. ಹಿಂದಿನ ಶಾಸಕರ ಪ್ರಯತ್ನವನ್ನೂ ಅಲ್ಲಗೆಳೆಯಲಾಗದು. ಆಗ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಮಾಧುಸ್ವಾಮಿ ಅವರ ಸಹಕಾರದಿಂದಲೇ ಯೋಜನೆಯು ಇಲ್ಲಿಯವರೆಗೆ ನಡೆದಿದೆ. ಪ್ರಸ್ತುತ ಶಾಸಕನಾಗಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ಸಂವಹನ ನಡೆಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ
ಎಚ್.ಕೆ.ಸುರೇಶ್ ಶಾಸಕ, ಬೇಲೂರು ಕ್ಷೇತ್ರ
ಯಗಚಿ ಏತ ನೀರಾವರಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣಕರ್ತರಾಗಿದ್ದರು. ಪ್ರಸ್ತುತ ಮಹತ್ವಾಕಾಂಕ್ಷೆಯ ರಣಘಟ್ಟ ಯೋಜನೆಗೆ ಈಗಿನ ಶಾಸಕರು, ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಧನಾತ್ಮಕ ಪ್ರತಿಕ್ರಿಯೆ ನೀಡುವ ನಂಬಿಕೆಯಿದೆ. ಕಾಮಗಾರಿ ಶೀಘ್ರವಾಗಿ ನಡೆದು ಕೆರೆಗೆ ನೀರು ಹರಿಯಲಿ ಎಂದು ನಾವು ಬಯಸುತ್ತೇವೆ.
ಹಾಲಪ್ಪ ರೈತ ಮುಖಂಡ, ಹಳೇಬೀಡು