ಅರಕಲಗೂಡು ತಾಲೂಕಿನ ಬಸವಾಪಟ್ಟಣದಲ್ಲಿ ಶುಕ್ರವಾರ ಜಾಬ್ ಕಾರ್ಡ್ ಮೇಳ ಹಾಗೂ ಅರಿವು ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ಎನ್.ಮಂಜುನಾಥ್ ವಿ.ಎನ್. ಪ್ರದೀಪ್, ಎಂ.ಎಸ್.ದಿವಾಕರ್, ಎಂ.ಇ.ಸುರೇಶ್ ಇದ್ದರು. 
ಹಾಸನ

ವಲಸೆ ತಡೆಗಟ್ಟುವುದು ವಿಬಿ ಜಿ ರಾಮ್ ಜಿ ಯೋಜನೆಯ ಉದ್ದೇಶ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಬಿ.ಎನ್.ಮಂಜುನಾಥ್ ಮಾಹಿತಿ

ಅರಕಲಗೂಡು:

ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವ ಮೂಲಕ ವಲಸೆ ಹೋಗುವುದನ್ನು ತಡೆಗಟ್ಟುವ ಉದ್ದೇಶ ಹೊಂದಿರುವ ವಿಬಿ ಜಿ ರಾಮ್ ಜಿ ಯೋಜನೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಬಸವಾಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ಜಾಬ್ ಕಾರ್ಡ್ ಮೇಳ ಹಾಗೂ ಅರಿವು ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕರಪತ್ರಗಳನ್ನು ವಿತರಿಸುವ ಮೂಲಕ ಗ್ರಾಮಸ್ಥರಿಗೆ ಯೋಜನೆಯಡಿ ದೊರೆಯುವ ಉದ್ಯೋಗ ಹಾಗೂ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಬಿ.ಎನ್.ಮಂಜುನಾಥ್ ಮಾತನಾಡಿ, ವಲಸೆಯನ್ನು ತಡೆಗಟ್ಟುವುದು ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವುದು ವಿಬಿ ಜಿ ರಾಮ್ ಜಿ ಯೋಜನೆ ಉದ್ದೇಶ. ಜತೆಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವುದಾಗಿದೆ. ಯೋಜನೆಯಡಿ ಗಂಡು-ಹೆಣ್ಣಿಗೆ ಸಮಾನವಾಗಿ ದಿನಕ್ಕೆ 382 ರೂ. ಕೂಲಿ ದೊರೆಯಲಿದ್ದು, ಕೂಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಕಡ್ಡಾಯವಾಗಿ ಉದ್ಯೋಗ ನೀಡಲಾಗುತ್ತದೆ. ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 125 ದಿನಗಳ ಉದ್ಯೋಗ ದೊರೆಯಲಿದ್ದು, ಒಟ್ಟು 47,750 ರೂ.ವರೆಗೆ ಕೂಲಿ ಪಡೆಯಬಹುದಾಗಿದೆ. ವೈಯಕ್ತಿಕ ಸೌಲಭ್ಯಗಳಿಗಾಗಿ ಒಂದು ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ನೆರವು ದೊರೆಯುವ ಅವಕಾಶವಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವಿ.ಎನ್. ಪ್ರದೀಪ್ ಮಾತನಾಡಿ, ಯೋಜನೆಯಡಿ ದನದ ಕೊಟ್ಟಿಗೆ, ಕುರಿ ಶೆಡ್, ಹಂದಿ ಶೆಡ್, ಕೋಳಿ ಶೆಡ್, ಎರೆಹುಳು ಘಟಕ, ತೆರೆದ ಬಾವಿ, ಬೋರ್‌ವೆಲ್ ರೀಚಾರ್ಜ್ ಪಿಟ್, ಸೋಕ್ ಪಿಟ್ ಹಾಗೂ ಪಿ.ಎಂ.ಎ.ವೈ ಯೋಜನೆಯಡಿ ಮನೆ ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಬಹುದು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ರಸ್ತೆ, ಚರಂಡಿ, ಬೂದು ನೀರು ನಿರ್ವಹಣೆ, ಸಾಮಾಜಿಕ ಸೋಕ್ ಪಿಟ್, ಸಾಮಾಜಿಕ ಬೋರ್‌ವೆಲ್ ರೀಚಾರ್ಜ್ ಪಿಟ್, ವಿಪತ್ತು ನಿರ್ವಹಣಾ ಕಾಮಗಾರಿಗಳು, ಚೆಕ್‌ಡ್ಯಾಂ ಸೇರಿದಂತೆ ವಿವಿಧ ಸಮುದಾಯ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಬಹುದಾಗಿದೆ. ಜಾಬ್ ಕಾರ್ಡ್‌ಗಳ ಮಹತ್ವದ ಕುರಿತು ಸಾರ್ವಜನಿಕರು ಅರಿವು ಹೊಂದಬೇಕು. ತಮ್ಮ ಜಾಬ್ ಕಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬಾರದು. ಜಾಬ್ ಕಾರ್ಡ್ ಬೇರೆಯವರ ಕೈಗೆ ನೀಡುವುದರಿಂದ ಯೋಜನೆಯಡಿ ದೊರೆಯುವ ಉದ್ಯೋಗ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಂ.ಇ. ಸುರೇಶ್, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.