ಲಯನ್ಸ್ ಕ್ಲಬ್ ಹಾಸನಾಂಬ ವತಿಯಿಂದ ವಿಶೇಷ ಅರಿವು ಕಾರ್ಯಕ್ರಮ ಮತ್ತು ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಕೆ.ಕೆ. ಮೋಹನ್ ಕುಮಾರ್, ಸಿ.ಎಂ. ಚಂಚಲಾ, ಎಂ.ಎಚ್.ಮಂಜುನಾಥ್, ಹರೀಶ್ ಕುಮಾರ್, ಸಿ.ಜಿ.ಕೇಶವಮೂರ್ತಿ ಇತರರಿದ್ದರು.
ಹಾಸನ: ಲಯನ್ಸ್ ಕ್ಲಬ್ ಹಾಸನಾಂಬ ವತಿಯಿಂದ ನಗರದ ರವೀಂದ್ರನಗರದಲ್ಲಿರುವ ಕುರುಹೀನ ಶೆಟ್ಟಿ ಸಮುದಾಯ ಭವನದಲ್ಲಿ ಗ್ರಾಹಕರ ಕಾನೂನು, ಸೋಲಾರ್ ಎನರ್ಜಿ, ವಾಹನಗಳ ಇನ್ಶೂರೆನ್ಸ್, ಜೀವ ವಿಮೆ ಹಾಗೂ ಸಾರ್ವಜನಿಕ ಉಪಯೋಗದ ಹಲವು ವಿಷಯಗಳ ಕುರಿತು ವಿಶೇಷ ಅರಿವು ಕಾರ್ಯಕ್ರಮ ಮತ್ತು ಸರ್ವಸದಸ್ಯರ ಸಾಮಾನ್ಯ ಸಭೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಕ್ಲಬ್ ಹಾಸನಾಂಬದ ಅಧ್ಯಕ್ಷ ಕೆ.ಕೆ. ಮೋಹನ್‌ಕುಮಾರ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಸಾಮಾನ್ಯ ಜನರಿಗೆ ಕಾನೂನು, ವಿಮೆ, ವಿದ್ಯುತ್ ಉಳಿತಾಯ ಮತ್ತು ಗ್ರಾಹಕರ ಹಕ್ಕುಗಳ ಕುರಿತು ಸಮರ್ಪಕ ಅರಿವು ಅಗತ್ಯವಾಗಿದೆ. ಇಂತಹ ಮಾಹಿತಿಗಳ ಕೊರತೆಯಿಂದ ಅನೇಕರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಸಮಾಜಕ್ಕೆ ಉಪಯುಕ್ತವಾದ ಜ್ಞಾನವನ್ನು ತಲುಪಿಸುವುದು ಲಯನ್ಸ್ ಕ್ಲಬ್‌ನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಹಾಸನ ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಸಿ.ಎಂ. ಚಂಚಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ದಿನನಿತ್ಯ ಜೀವನದಲ್ಲಿ ಖರೀದಿಸುವ ವಸ್ತುಗಳಿಂದ ಹಿಡಿದು ಸೇವೆಗಳವರೆಗೆ ಪ್ರತಿಯೊಬ್ಬರೂ ಗ್ರಾಹಕರೇ ಆಗಿದ್ದಾರೆ. ವಂಚನೆ, ಕಳಪೆ ಗುಣಮಟ್ಟದ ವಸ್ತುಗಳು, ತಪ್ಪು ಜಾಹೀರಾತುಗಳು ಮತ್ತು ಸೇವಾ ದೋಷಗಳ ವಿರುದ್ಧ ಗ್ರಾಹಕರಿಗೆ ಕಾನೂನು ರಕ್ಷಣೆಯಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಎಂ.ಎಚ್.ಮಂಜುನಾಥ್, ಖಜಾಂಚಿ ಹರೀಶ್ ಕುಮಾರ್, ಪ್ರಾಂತೀಯ ಅಧ್ಯಕ್ಷ ಸಿ.ಜಿ.ಕೇಶವಮೂರ್ತಿ, ಜಿಲ್ಲಾ ಸಂಪುಟ ಸಹ ಕಾರ್ಯದರ್ಶಿ ತಿಮ್ಮರಾಯ ಶೆಟ್ಟಿ, ರೀಸನ್ ಅಂಬಾಸಿಡರ್ ಕೃಷ್ಣಶೆಟ್ಟಿ, ಎ ಟು ಜೆಡ್ ಸೋಲಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ಕೃಷ್ಣ ಓಲೆಟಿ, ಡಿ.ಎಸ್.ಸುನೈ ಇತರರಿದ್ದರು.