ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ದಶನವನ್ನು ಸಾವಜನಿಕರು ಪಡೆದರು.
- ಕಂಬನಿ ಮಿಡಿದ ತವರಿನ ಜನ
- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ
ಹಾಸನ: ಕೊನೆಯದಾಗಿ ತಿರುಪತಿ ಪ್ರಸಾದ ಕೊಟ್ಟು ಅಮ್ಮನನ್ನು ಮಾತನಾಡಿಸಿದ್ದೆ. ವೈದ್ಯರು ಚೆನ್ನಮ್ಮ ಗುಣಮುಖರಾಗುತ್ತಾರೆ ಎಂದಿದ್ದರು. ಆದರೆ, ಅವರು ಬದುಕಿ ಬರಲಿಲ್ಲ. ಎಷ್ಟೋ ಜನರಿಗೆ ಅನ್ನ ಹಾಕಿದ ಕೈ ಅವರದು ಎಂದು ಹೇಳುತ್ತಲೇ ಉಮ್ಮಳಿಸಿ ಬಂದ ದುಃಖ ತಡೆಯಲಾರದೆ ಶಾಸಕ ಎಚ್.ಡಿ. ರೇವಣ್ಣ ಗಳಗಳನೆ ಅತ್ತುಬಿಟ್ಟರು.
ತಂದೆ ಎಚ್.ಡಿ.ದೇವೇಗೌಡರು ಮತ್ತು ಚೆನ್ನಮ್ಮ ಅವರಿಗೆ ನನ್ನ ಕಂಡರೆ ವಿಶೇಷ ಪ್ರೀತಿ, ಅವರ ಮುದ್ದಿನ ಮಗನಾನು ಎಂದು ಹೇಳಿದರು.
ಸಮಾಧಿ ಸ್ಥಳ ಹಸನು ಮಾಡುವ ಸ್ಥಳದಲ್ಲಿ ಹತ್ತಾರು ಜೆಸಿಬಿಗಳು, ಲಾರಿಗಳು ಕೆಲಸ ಮಾಡುತ್ತಿವೆ. ರೇವಣ್ಣ ಅವರೊಂದಿಗೆ ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘುಗೌಡ ಇತರರು ಇದ್ದಾರೆ.
ತಾಯಿ ಚೆನ್ನಮ್ಮ ಅದೆಷ್ಟೋ ಬಾರಿ ಹೇಗೆ ಬದುಕಬೇಕೆಂದು ನನಗೆ ಹಿತವಚನ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಹಲವು ಪಕ್ಷಗಳಲ್ಲಿರುವ ನಾಯಕರೆಲ್ಲ ನಮ್ಮಮ್ಮನ ಆರೈಕೆಯಲ್ಲಿ ಬೆಳೆದವರೆ. ಹೀಗಾಗಿ ಅವರ ಬಗ್ಗೆ ಗೌರವ ಇಟ್ಟುಕೊಂಡು ಎಲ್ಲರೂ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಇವತ್ತಿನ ಸಮಾಜಕ್ಕೆ ನಮ್ಮ ತಂದೆ-ತಾಯಿಯ ದಾಂಪತ್ಯ ಮಾದರಿಯಾಗಿದೆ. ಗಂಡ ಪ್ರಧಾನಿ, ಮುಖ್ಯಮಂತ್ರಿಯಾದಾಗಲೂ ಅವರು ಮನೆಯಿಂದ ಹೊರ ಬಂದವರಲ್ಲ. ಅವರಾಯಿತು, ಅವರ ದೇವರ ಮನೆಯಾಯಿತು ಎಂದು ಇದ್ದರು.
ಚೆನ್ನಮ್ಮ ಅವರು ಹೆತ್ತ ತಾಯಿಗಿಂತಲೂ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿದ್ದರು. ನಮ್ಮಿಬ್ಬರದ್ದು ತಾಯಿ-ಮಗಳ ಸಂಬಂಧ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಭಾವುಕರಾದರು.
ಮನೆಗೆ ಯಾರೇ ಬಂದರೂ ಊಟ-ಉಪಾಹಾರ ಕೊಟ್ಟೇ ಕಳುಹಿಸುತ್ತಿದ್ದರು. ಹೊಳೆನರಸೀಪುರದಲ್ಲೇ ಹೆಚ್ಚು ಸಮಯ ಇರುತ್ತಿದ್ದರು. ಪೂಜೆ ಪುನಸ್ಕಾರ, ಮದುವೆ ಸಮಾರಂಭ ಏನೇ ಇದ್ದರೂ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. 2001ರಲ್ಲಿ ನಡೆದ ಆ್ಯಸಿಡ್ ದಾಳಿಯಿಂದ ಭಾರಿ ಕುಗ್ಗಿದ್ದರು. ಆ ಭೀಕರ ಘಟನೆಯನ್ನು ಮರೆತು ಮೊದಲಿನಂತೆ ಬದುಕು ಕಟ್ಟಿಕೊಂಡರು.
ಹೊಳೆನರಸೀಪುರ ಪಟ್ಟಣದ ಮನೆ ಅವರಿಗೆ ತುಂಬಾ ಇಷ್ಟವಾಗಿತ್ತು. ಯಾವಾಗಲಾದರೂ ಬಂದಾಗ ಲವಲವಿಕೆಯಿಂದ ಇರುತ್ತಿದ್ದರು. ಅವರ ಅಗಲಿಕೆ ತೀವ್ರ ನೋವು ತರಿಸಿದೆ ಎಂದು ಹೇಳಿದರು.
ದೇವೇಗೌಡರ ಜೀವನದ ಪ್ರತಿ ಹೆಜ್ಜೆಯಲ್ಲೂ ಅಮ್ಮ ಇದ್ದಾರೆ
ಚೆನ್ನಮ್ಮ ಅವರ ನಿಧನ ಸುದ್ದಿ ತೀವ್ರ ಆಘಾತ ತರಿಸಿದೆ. ಎಲ್ಲರ ಕುಟುಂಬಕ್ಕೂ ತಾಯಿಯೇ ಆಧಾರ ಸ್ತಂಭ ಆಗಿರುತ್ತಾರೆ. ದೇವೇಗೌಡರು ಹಾಗೂ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ದೇಶದ ಪ್ರಧಾನಿಯಾಗಿ ಜಿಲ್ಲೆಯ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ದೇವೇಗೌಡರ ಜೀವನದ ಪ್ರತಿ ಹೆಜ್ಜೆಯಲ್ಲೂ ಚೆನ್ನಮ್ಮ ಅವರ ಕೊಡುಗೆ ಇದೆ. ಸರಳತೆ, ಸೌಮ್ಯ ಸ್ವಭಾವ ಹಾಗೂ ಕಾಳಜಿ ಗುಣಗಳಿಂದ ಅವರು ಮನ್ನಣೆ ಗಳಿಸಿದ್ದರೆಂದರು.
ಚೆನ್ನಮ್ಮ ದೇವೇಗೌಡರ ನಿಧನಕ್ಕೆ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ಅವರ ತಾಯಿ ಲಲಿತಮ್ಮ ಮತ್ತು ಕುಟುಂಬದವರು ತೀವ್ರ ಕಂಬನಿ ಮಿಡಿದಿದ್ದಾರೆ. ಚೆನ್ನಮ್ಮ ಅವರು ನಮ್ಮ ತಂದೆಯ ಕಾಲದಿಂದಲೂ ನಮ್ಮ ಕುಟುಂಬಕ್ಕೆ ಮಾರ್ಗದರ್ಶಕರಾಗಿದ್ದರು. ನಮ್ಮ ಕುಟುಂಬದ ಬಹುತೇಕರು ಅವರ ಕೈ ತುತ್ತು ತಿಂದು ಬೆಳೆದಿದ್ದೇವೆ. ಅವರ ಮಾರ್ಗದರ್ಶನ, ನೆರಳಿನಲ್ಲಿ ರಾಜಕೀಯ ಭವಿಷ್ಯ ಕಂಡುಕೊಂಡಿದ್ದೇವೆ.
ಅಪ್ಪಾಜಿ ದೇವೇಗೌಡರಿಗೆ ಚೆನ್ನಮ್ಮ ಅವರು ದೊಡ್ಡ ಬಲವಾಗಿದ್ದರು. ಅವರ ದೈವಭಕ್ತಿ, ಅವರು ದೊಡ್ಡ ಕುಟುಂಬವನ್ನು ದೊಡ್ಡ ಹಂತಕ್ಕೆ ಬೆಳೆಸಿದ ರೀತಿ ಪ್ರತಿಯೊಬ್ಬರಿಗೂ ಮಾದರಿ ಮತ್ತು ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬೇಡುತ್ತೇನೆ.
ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರಿನಿಂದ 4 ಸಾವಿರ ಕುರ್ಚಿಗಳನ್ನು ತರಿಸಲಾಯಿತು. ಜೆಸಿಬಿ, ಇಟಾಚಿ, ರೋಲರ್‌ಗಳನ್ನು ಬಳಸಿ ಅಂತ್ಯಕ್ರಿಯೆ ನಡೆಯುವ ಸ್ಥಳವನ್ನು ಸಮತಟ್ಟುಗೊಳಿಸಲಾಯಿತು.
ಭದ್ರತೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಒಟ್ಟು 1400 ಪೊಲೀಸ್ ಸಿಬ್ಬಂದಿ, 5 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 250 ಪಿಎಸ್‌ಐ ಹಾಗೂ 60 ಡಿವೈಎಸ್‌ಪಿಗಳ ನೇಮಿಸಲಾಗಿದೆ. ಎಂದು
ಚೆನ್ನಮ್ಮ ಅವರ ನಿಧನ ಕುಟುಂಬದ ಸದಸ್ಯರಿಗೆ ಆಘಾತ ಉಂಟು ಮಾಡಿದೆ. ಚೆನ್ನಮ್ಮ ಅವರ ಸಹೋದರ ವಿಶ್ವನಾಥ್, ಅಕ್ಕನ ನಿಧನಕ್ಕೆ ಅತೀವ ದುಃಖ ವ್ಯಕ್ತಪಡಿಸಿದ್ದು, ಅವರು ನಮ್ಮ ಕುಟುಂಬಕ್ಕೆ ದೇವರಾಗಿದ್ದರು. ನಮ್ಮನ್ನು ಸಾಕಿ, ಬೆಳೆಸಿದ್ದು ಅವರೇ. ಕುಟುಂಬದ ಎಲ್ಲ ಜವಾಬ್ದಾರಿಗಳನ್ನು ಚೆನ್ನಮ್ಮ ವಹಿಸಿಕೊಂಡಿದ್ದರು. ನಾವು ಅವರು ಹಾಕಿದ ಗೆರೆ ದಾಟುತ್ತಿರಲಿಲ್ಲ. ಅವರು ನಮಗೆ ದೇವರು. ಅವರ ನೆರವಿನಿಂದಲೇ ನಾವು ಉತ್ತಮ ಉದ್ಯೋಗ ಪಡೆದು ಗೌರವಯುತ ಜೀವನ ನಡೆಸಲು ಸಾಧ್ಯವಾಯಿತು ಎಂದು ಅಕ್ಕನನ್ನು ನೆನೆದು ಅತ್ತರು.
ಚೆನ್ನಮ್ಮ ನಿಧನ ಹಿನ್ನೆಲೆ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ಗಂಟೆ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಂಜಾಗ್ರತಾ ಕ್ರಮ ವಹಿಸಿರುವುದಾಗಿ ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದ್ದಾರೆ.
ಚೆನ್ನಮ್ಮ ಅವರ ಅಂತ್ಯಕ್ರಿಯೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ನಡೆಯಲಿರುವುದರಿಂದ ಗಣ್ಯರು, ರಾಜಕೀಯ ಮುಖಂಡರು, ಸಹಸ್ರಾರು ಜನರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹೊಳೆನರಸೀಪುರದಲ್ಲಿ ವಾಹನ ದಟ್ಟಣೆ ತಪ್ಪಿಸಲು ಮೈಸೂರು- ಹೊಳೆನರಸೀಪುರ-ಹಾಸನ ಮಾರ್ಗ ಸಂಚರಿಸುವ ವಾಹನಗಳಿಗೆ ಅರಕಲಗೂಡು ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿದೆ. ಅರಸೀಕೆರೆ ಕಡೆಯಿಂದ ಸಂಚರಿಸುವ ವಾಹನಗಳು ಬರಗೂರು ಹ್ಯಾಂಡ್ ಪೋಸ್ಟ್ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.
ನಿಯಮ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆಯವರೆಗೆ ಇರಲಿದೆ. ಬದಲಿ ಮಾರ್ಗ ಸೂಚಿಸಿ ಡಿಸಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಚೆನ್ನಮ್ಮ ಅವರು ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದರು. ಎಲ್ಲರ ಕಷ್ಟಕ್ಕೂ ಸಹಕಾರಿಯಾಗಿದ್ದರು ಎಂದು ಚೆನ್ನಮ್ಮ ಅವರ ಕುರಿತು ಹುಟ್ಟೂರು ಮುತ್ತಿಗೆ ಹಿರೇಹಳ್ಳಿ ಸಂಬಂಧಿಕರು ನುಡಿದರು. ಏನೆ ಸಮಸ್ಯೆ ಇದ್ದರೂ ನಮಗೆ ನೆರವಾಗುತ್ತಿದ್ದರು. ಎಲ್ಲ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ಜಾತ್ರೆಗೆ ಬಂದಾಗ ಎಲ್ಲ ಬಡವರಿಗೂ ಹಣ ಕೊಟ್ಟು ಹೋಗುತ್ತಿದ್ದರು. ಅವರ ನಿಧನದಿಂದ ನಮಗೆಲ್ಲ ನೋವಾಗಿದೆ ಸಂಬಂಧಿಗಳು ನೋವಿನಿಂದ ನುಡಿದರು.
ಚನ್ನಮ್ಮ ಅವರ ಮನೆಗೆ ಹೋದರೆ ಅವರೇ ಅಡುಗೆ ಮಾಡಿ ಬಡಿಸುತ್ತಿದ್ದರು. ಯಾವುದೇ ಆಳುಗಳಿಗೆ ಬಡಿಸಲು ಬಿಡುತ್ತಿರಲಿಲ್ಲ. ಸ್ವತಃ ಕೈಯಾರೆ ಊಟ ಬಡಿಸಿ ಬೀಳ್ಕೊಡುತ್ತಿದ್ದರು. ಸಂಬಂಧಿಕರು ಅಂದ್ರೆ ಅಷ್ಟು ಪ್ರೀತಿ ಎಂದು ಕಣ್ಣೀರು ಹಾಕಿದರು.
ದೇವಾಲಯ ನಿರ್ಮಿಸಿಕೊಟ್ಟಿದ್ದ ಅಮ್ಮ
ಹೊಳೆನರಸೀಪುರದ ಮುತ್ತಿಗೆ ಹಿರೇಹಳ್ಳಿಯಲ್ಲಿ ಚೆನ್ನಮ್ಮ ಚಂಡಿಕಾಂಬ ದೇವಾಲಯ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಚಂಡಿಕಾಂಬ ದೇವಿ ಹೆಸರಿಂದಲೇ ಚೆನ್ನಮ್ಮ ಹೆಸರು ಬಂದಿದ್ದು ಎಂದು ಹೇಳಲಾಗುತ್ತದೆ. ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆಯುತ್ತದೆ. ಮೊದಲ ಪೂಜೆಯನ್ನು ಚನ್ನಮ್ಮ ಅವರೇ ಸಲ್ಲಿಸುತ್ತಿದ್ದರು. ನಂತರ ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಗ್ರಾಮ ಎಂದರೆ ಅಷ್ಟು ಇಷ್ಟ ಪಡುತ್ತಿದ್ದರು. ಸುತ್ತಮುತ್ತ ಅನೇಕ ಗ್ರಾಮಗಳಿಗೂ ದೇವಾಲಯ ಕಟ್ಟಿಸಿದ್ದಾರೆ. ದೇವರಿಗೆ ನಿಷ್ಠೆಯಿಂದ ಇದ್ದರು. ಗ್ರಾಮದ ಯಾರೇ ಹೋದರೂ ಪ್ರೀತಿಯಿಂದ ಕಾಣುತ್ತಿದ್ದರು. ಅವರನ್ನು ಕಳೆದುಕೊಂಡು ನಾವು ಬಡವಾಗಿದ್ದೇವೆ ಗ್ರಾಮಸ್ಥರು ಭಾವುಕರಾದರು.