ಕರಿಯಮ್ಮ ದೇವಿ ದೇವಸ್ಥಾನ 
ಹಾಸನ

ಕಷ್ಟ ಕಾರ್ಪಣ್ಯ ಕಳೆಯುವ ಕರಿಯಮ್ಮ

ಬೇಲೂರು: ಕಷ್ಟ ಎಂದು ಬೇಡಿ ಬಂದ ಭಕ್ತರಿಗೆ ದಯೆ ತೋರಿ ಇಷ್ಟಾರ್ಥ ಈಡೇರಿಸಿ ಎಲ್ಲ ಭಕ್ತರನ್ನು ಮಕ್ಕಳಂತೆ ಸಲಹುವ ಹನಿಕೆ ಗ್ರಾಮದ ಕರಿಯಮ್ಮ ದೇವಿ ಹನಿಕೆಯಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮ ದೇವತೆಯಾಗಿದ್ದಾಳೆ.
ಬೇಲೂರು ತಾಲೂಕಿನ ಹನಿಕೆ ಗ್ರಾಮದಲ್ಲಿ ನೆಲೆನಿಂತು ಬೇಡಿ ಬಂದ ಭಕ್ತರ ಕಷ್ಟ ಕಾರ್ಪಣ್ಯ ಕಳೆಯುವ ಆದಿಶಕ್ತಿ ಕರಿಯಮ್ಮ ಚಾಮುಂಡೇಶ್ವರಿ ದೇವಿಯ ತದ್ರೂಪಿ ದೇವತೆ. ಕೊಟ್ಟ ಮಾತಿಗೆ ತಪ್ಪಿದವಳಲ್ಲ ಎಂಬುದು ಭಕ್ತರ ನಂಬಿಕೆ. ಕರಿಯಮ್ಮ ದೇವರ ಉತ್ಸವ ಮೂರ್ತಿಯನ್ನು ರಾಜ್ಯದ ವಿವಿಧ ಭಾಗಗಳು ಹಾಗೂ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡಿಗೂ ಭಕ್ತರು ಕರೆದುಕೊಂಡು ಹೋಗಿ ತಮ್ಮ ಮನೆ ಮತ್ತು ವ್ಯವಹಾರದ ಸ್ಥಳದಲ್ಲಿ ಪೂಜಿಸಿ ಆಶೀರ್ವಾದ ಪಡೆಯುತ್ತಾರೆ. ದೂರದ ಊರುಗಳಲ್ಲಿಯೂ ಕರಿಯಮ್ಮನಿಗೆ ಭಕ್ತರಿದ್ದಾರೆ.
ವಿಶೇಷವೆಂದರೆ ಹನಿಕೆ ಗ್ರಾಮದೊಳಗೆ ಶ್ರೀ ಬಸವೇಶ್ವರ ದೇವಸ್ಥಾನವಿದ್ದು, ಇಲ್ಲಿ ಮುಕ್ಕಣ್ಣೇಶ್ವರನ ಮೂರ್ತಿ ಸ್ಥಾಪಿಸಿ ಪೂಜಿಸಲಾಗುತ್ತಿದೆ. ಹಬ್ಬ ಹರಿದಿನಗಳಂದು ಗ್ರಾಮ ದೇವತೆ ಕರಿಯಮ್ಮ ಹಾಗೂ ಶ್ರೀ ಬಸವೇಶ್ವರ ದೇವರನ್ನು ಪ್ರತ್ಯೇಕ ಅಡ್ಡೆಯಲ್ಲಿರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಎರಡು ಅಡ್ಡೆಗಳ ದೇವತೆಗಳಿಗೆ ತಲೆಭಾಗಿ ನಮಸ್ಕರಿಸಿದ ಭಕ್ತರಿಗೆ ಆಶೀರ್ವದಿಸುತ್ತಾರೆ. ಭಕ್ತರ ಕೋರಿಕೆಗಳಿಗೆ ದೇವರ ಅಡ್ಡೆ ತೂಗಿ ಉತ್ತರಿಸುವುದು ಹಾಗೂ ತನ್ನ ತಲೆ ಮೇಲಿನ ಚೂಪಾದ ಕಿರೀಟದಿಂದ ಗೋಡೆ ಮೇಲೆ ಬರೆದು ಅರ್ಥೈಸುವುದು, ಭಕ್ತರ ಸಮಸ್ಯೆ ಪರಿಹರಿಸಿ, ಕಷ್ಟ ನಿವಾರಿಸುತ್ತಿರುವುದರಿಂದ ಕರಿಯಮ್ಮ ದೇವಿಗೆ ಭಕ್ತ ಸಮೂಹ ಹೆಚ್ಚುತ್ತಿದೆ.
ತಪ್ಪು ಮಾಡಿದವರಿಗೆ ಬುದ್ಧಿ ಹೇಳುಸುವ ಕರಿಯಮ್ಮ ತಾಯಿ, ತಪ್ಪು ಒಪ್ಪಿಕೊಳ್ಳದಿದ್ದಾಗ ರುದ್ರಾವತಾರ ತಾಳಿ ಅಡ್ಡೆಯಿಂದ ಹೊಡೆದ ಸಾಕಷ್ಟು ಪ್ರಸಂಗಗಳು ಇವೆ ಎನ್ನುತ್ತಾರೆ ಗ್ರಾಮಸ್ಥರು. ದೇವರ ಆಶೀರ್ವಾದದಿಂದ ಸಾಕಷ್ಟು ಜನರು ಮದ್ಯ ಕುಡಿಯುವ ಚಟದಿಂದ ಹೊರಬಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಭಕ್ತರು ದೇವರನ್ನು ಪ್ರಾರ್ಥಿಸಿ ವ್ಯವಹಾರದ ಸ್ಥಳಕ್ಕೆ ದೇವರ ಮೂರ್ತಿ ಕರೆದೊಯ್ದ ಪೂಜೆ ನೆರವೇರಿಸಿದ ನಂತರ ಶ್ರೀಮಂತರಾಗಿದ್ದೇವೆ ಎನ್ನುತ್ತಾರೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ, ವಿವಾಹ, ಸಾಂಸಾರಿಕ ತೊಂದರೆ ಹಾಗೂ ಜೀವನದಲ್ಲಿ ನೊಂದವರು ಕರಿಯಮ್ಮನಲ್ಲಿ ಭಕ್ತಿಯಿಂದ ಬೇಡಿದರೆ ಎಂದಿಗೂ ಕೈ ಬಿಡುವುದಿಲ್ಲ ಎನ್ನುತ್ತಾರೆ ಭಕ್ತರು.
ಹನಿಕೆ ಗ್ರಾಮದಲ್ಲಿರುವ ಕರಿಯಮ್ಮ ಹಾಗೂ ಬಸವೇಶ್ವರ ದೇಗುಲಗಳಲ್ಲಿ ದೇವರಿಗೆ ವಿಶೇಷ ಸಂದರ್ಭ ಒಬ್ಬಟ್ಟು ಪಾಯಸ ಮತ್ತು ಹಣ್ಣುಗಳ ನೈವೇದ್ಯ ಮಾಡಲಾಗುತ್ತದೆ. ದೇವಸ್ಥಾನದ ಮುಂಭಾಗದಲ್ಲಿರುವ ಭೂತಪ್ಪನಿಗೆ ಮಾಂಸಾಹಾರ ನೈವೇದ್ಯ ಮಾಡುತ್ತಾರೆ. ಗ್ರಾಮದಲ್ಲಿ ಹಿರಿ ಅಣ್ಣನಂತೆ ಎರಡು ಕರಿ ಕಲ್ಲುಗಳಿದ್ದು, ಗ್ರಾಮಸ್ಥರು ಅದಕ್ಕೂ ಗುಡಿಕಟ್ಟಿ ಪೂಜಿಸುವುದನ್ನು ಕಾಣಬಹುದಾಗಿದೆ.
ಪ್ರತಿದಿನ ಗ್ರಾಮದ ಎರಡೂ ದೇವಸ್ಥಾನಗಳಲ್ಲಿ ಪೂಜೆ ನಡೆದರೆ ವಾರದಲ್ಲಿ ಎರಡು ಮೂರು ದಿನ ಕರಿಯಮ್ಮ ದೇಗುಲದಲ್ಲಿ ಭಕ್ತರ ದಂಡೇ ಸೇರಿ ತಮ್ಮ ಕಷ್ಟಗಳನ್ನು ಹೇಳಿ ಪರಿಹಾರ ಪಡೆಯುತ್ತಾರೆ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಬರುವ ಭಕ್ತರು ರಾತ್ರಿ ದೇಗುಲ ಸಮೀಪವೇ ಮಲಗಿ ಬೆಳಗ್ಗೆ ಎದ್ದು ತಮ್ಮೂರಿಗೆ ತೆರಳುತ್ತಾರೆ. ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ದೇವರ ಕಾಯಿ, ಕಟ್ಟಲೆ ಮಾಡುವುದು, ತಡೆ ಒಡೆಯುವ ಪದ್ಧತಿ ಇದೆ. ಭಕ್ತರು ಇಲ್ಲಿಂದ ಮಂತ್ರಿಸಿದ ನಿಂಬೆಹಣ್ಣು ವಿಭೂತಿ ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು ಪೂಜಿಸುತ್ತಾರೆ.
ದೇವಾಲಯ ಇತಿಹಾಸ: ನೂರಾರು ವರ್ಷಗಳ ಹಿಂದೆ ಹನಿಕೆ ಗ್ರಾಮದಲ್ಲಿದ್ದ ಕರಿಯಮ್ಮ ದೇವರ ವಿಗ್ರಹವನ್ನು ಕೆಲವರ ಮನಸ್ಥಾಪದಿಂದ ಯಗಚಿ ನದಿಯಲ್ಲಿ ತೇಲಿ ಬಿಟ್ಟಾಗ ಇನ್ನೊಂದು ಬದಿಯಲ್ಲಿದ್ದ ಪಡುವಳಲು ಗ್ರಾಮಸ್ಥರು ಎತ್ತಿಕೊಂಡು ಹೋಗಿ ಆ ವಿಗ್ರಹವನ್ನು ಪೂಜಿಸಲು ಪ್ರಾರಂಭಿಸಿದ್ದರು. ನಂತರ ಆ ಗ್ರಾಮದಿಂದ ಮರಳಿ ದೇವರ ವಿಗ್ರಹವನ್ನು ಪಡೆದ ಹನಿಕೆ ಗ್ರಾಮಸ್ಥರು ತನ್ನೂರಿನಲ್ಲೇ ಮರುಪ್ರತಿಷ್ಠಾಪಿಸಿ ದೇಗುಲ ನಿರ್ಮಿಸಿ ಪೂಜಿಸಲು ಪ್ರಾರಂಭಿಸಿದರು ಎಂಬ ಇತಿಹಾಸವಿದೆ. ಪಕ್ಕದ ಪಡುವಳಲು ಗ್ರಾಮ ಈ ದೇವತೆಗೆ ತವರು ಮನೆ ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿದೆ. ಪ್ರತಿ ವರ್ಷ ಹನಿಕೆ ಗ್ರಾಮದಲ್ಲಿ ನಡೆಯುವ ದೇವರ ಜಾತ್ರೆ ಸಂದರ್ಭ ಎರಡು ದಿನ ಮುಂಚಿತವಾಗಿ ಪಡುವಳಲು ಗ್ರಾಮದಲ್ಲಿ ದೇವತೆಯ ಉತ್ಸವ ಮೂರ್ತಿ ಮೆರವಣಿಗೆ ಮಾಡಿ, ಪೂಜಿಸಿ, ಮಡಿಲಕ್ಕಿ ಕೊಟ್ಟು ಕಳಿಸುವ ಪ್ರತೀತಿ ಇದೆ. ಹನಿಕೆ ಸೇರಿದಂತೆ ಪಡುವಳಲು ಗ್ರಾಮದ ಯಾವುದೇ ಮನೆಗಳಲ್ಲೂ ಶುಭ ಕಾರ್ಯ ನಡೆದರೆ ದೇವರನ್ನು ಕರೆತಂದು ಪೂಜಿಸುವ ಪದ್ಧತಿ ಇಂದಿಗೂ ನಡೆದು ಕೊಂಡು ಬಂದಿದೆ.