ಬೇಲೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶ್ರೀಧರ್ ಕಂಕನವಾಡಿ, ಯೋಗೇಶ್, ಶಿವನಗೌಡ ಜಿ.ಪಾಟೀಲ್, ಭಾಗ್ಯಮ್ಮ ಇತರರಿದ್ದರು. 
ಹಾಸನ

ಮಲ ಹೊರುವ ಪದ್ಧತಿ ನಿಷೇಧಿಸಿದ ಅರಸು

ಬೇಲೂರು:

ಹಿಂದುಳಿದ ಹಾಗೂ ಶೋಷಿತ ಸಮಾಜಗಳ ಏಳಿಗೆಗಾಗಿ ಶ್ರಮಿಸಿದ ಧೀಮಂತ ನಾಯಕ ಡಿ.ದೇವರಾಜ ಅರಸು ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂದು ವಿದ್ಯಾರ್ಥಿನಿಲಯಗಳಲ್ಲಿ ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರೆ ಅದಕ್ಕೆ ಡಿ.ದೇವರಾಜ ಅರಸು ಕಾರಣ. ಉದ್ಯೋಗ ಮತ್ತು ಶಿಕ್ಷಣದಿಂದ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ ಎಂಬುದನ್ನು ಅರಿತು ಸಮಾನತೆ ಸಾರಿದರು ಎಂದರು.
ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣಬೇಕೆಂಬ ಉದ್ದೇಶದಿಂದ ಉಳುವುವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ಕ್ರಾಂತಿಕಾರಿ ನಿಲುವು ತೆಗೆದುಕೊಂಡು ಬಡವರ ಬಾಳು ಬೆಳಗಿದರು. ಸಮಾಜದಲ್ಲಿ ಅಡಗಿದ್ದ ಅನಿಷ್ಟ ಮಲ ಹೊರುವ ಪದ್ಧತಿ ನಿಷೇಧಿಸಿದರು. ಶ್ರೇಣಿಕೃತ ಜಾತಿ ವ್ಯವಸ್ಥೆಯ ವಿರುದ್ಧ ನಿಂತು ಉದ್ಯೋಗ ಮತ್ತು ಶಿಕ್ಷಣದಲ್ಲಿ ಬುಡಕಟ್ಟು, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಕ್ಕಾಗಿ ಆಯೋಗ ರಚಿಸಿ ಸಾಕಷ್ಟು ಜನರು ಉದ್ಯೋಗ ಪಡೆಯುವಂತೆ ಮಾಡಿದರು ಎಂದು ಸ್ಮರಿಸಿದರು.
ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಒಂದು ಜಾತಿಗೆ ಮೀಸಲಾದವರಲ್ಲ. ಎಲ್ಲ ಸಮಾಜಕ್ಕೂ ಅವರ ಕೊಡುಗೆ ಅಪಾರವಾಗಿದೆ ಎಂದರು.
ಹಾಸನದ ಸಂತ ಫಿಲೋಮಿನ ಪದವಿ ಕಾಲೇಜಿನ ಉಪನ್ಯಾಸಕ ಯೋಗೇಶ್ ಉಪನ್ಯಾಸ ನೀಡಿದರು. ಪಿಎಸ್‌ಐ ಶಿವನಗೌಡ ಜಿ.ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಬಿಆರ್‌ಸಿ ಶಿವಮರಿಯಪ್ಪ, ಕೃಷಿ ಇಲಾಖೆ ಎಡಿ ಕಾಂತರಾಜು, ನಿವೃತ ತಹಸೀಲ್ದಾರ್ ಅಣ್ಣೇಗೌಡ, ಹಿಂದುಳಿದ ವರ್ಗಗಳ ಅಧಿಕಾರಿ ಮುದುಕಪ್ಪ ಜಿ.ಜಾಯಾವಾಡಗಿ , ಕೆಡಿಪಿ ಸದಸ್ಯೆ ಜ್ಯೋತಿ, ಕರವೇ ಅಧ್ಯಕ್ಷ ಚಂದ್ರಶೇಖರ್, ಚನ್ನಕೇಶವ ದೇಗುಲದ ಇಒ ಯೋಗೀಶ್, ಸವಿತಾ ಸಮಾಜದ ನಗರಾಧ್ಯಕ್ಷ ಆನಂದ್ ಇದ್ದರು.