ಪಟ್ಟಣದ ಶ್ರೀಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಅರ್ಜುನ ಅವಧೂತ ಮಹಾರಾಜರಿಗೆ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ.ಡಿ.ಅಶೋಕ್ ಗುರು ವಂದನೆ ಸಲ್ಲಿಸಿದರು. ಬಿ.ಗಿರೀಶ್, ವಿಜಯಕುಮಾರ್, ಡಾ,ರಾಜ್ ಇತರರಿದ್ದರು.
- ಶ್ರೀ ಅರ್ಜುನ ಅವಧೂತ ಮಹಾರಾಜ್ ಹೇಳಿಕೆ
ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ವಿಶೇಷ ಹಾಗೂ ಶ್ರೇಷ್ಠ ಸ್ಥಾನವಿದ್ದು, ಗುರುಭಕ್ತಿ, ನಂಬಿಕೆ, ಅನುಗ್ರಹ ಮತ್ತು ಸಾಕ್ಷಾತ್ಕಾರದ ಮೂಲಕ ಗುರುವನ್ನು ಸ್ವೀಕರಿಸುವ ಪರಂಪರೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಶ್ರೀ ಅರ್ಜುನ ಅವಧೂತ ಮಹಾರಾಜರು ಹೇಳಿದರು.
ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗುರು ವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಧರ್ಮದಲ್ಲೂ ಗುರು ಪರಂಪರೆ ಇದ್ದರೂ ಹಿಂದೂ ಧರ್ಮದಲ್ಲಿನ ಗುರು ಪರಂಪರೆಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಗುರು ವಾತ್ಸಲ್ಯಮಯಿ ಹಾಗೂ ಮಾತೃ ಸ್ವರೂಪಿಯಾಗಿದ್ದಾಗ ಭಕ್ತರಲ್ಲಿ ಪ್ರೀತಿ, ವಿಶ್ವಾಸ ಮತ್ತು ಭಕ್ತಿ ಬೆಳೆಯಲು ಸಾಧ್ಯ. ಗುರು ಜಾತಿ, ಧರ್ಮ ಹಾಗೂ ವರ್ಗದ ಎಲ್ಲೆಗಳನ್ನು ಮೀರಿ ಎಲ್ಲರನ್ನೂ ಸಮಾನಾಗಿ ಕಾಣಬೇಕು. ಭಕ್ತರಿಗೆ ದೇವರನ್ನು ತೋರಿಸುವ ಹೊಣೆಗಾರಿಕೆ ಗುರುವಿನ ಮೇಲಿದೆ. ಅತಿಯಾಸೆ ನೆಮ್ಮದಿ ಕಸಿಯುತ್ತಿದೆ. ಇಂದಿನ ದಿನಗಳಲ್ಲಿ ಆಸೆ ದುರಾಸೆಗಳ ಆರ್ಭಟದಿಂದ ಮನುಷ್ಯ ತನ್ನ ಅವನತಿಗೆ ತಾನೇ ಕಾರಣನಾಗುತ್ತಿರುವುದು ದೊಡ್ಡ ದುರಂತ. ಅತಿಯಾಸೆಯಿಂದ ದುಃಖಕ್ಕೊಳಗಾಗುವುದರ ಜತೆಗೆ ತನ್ನ ಅಸ್ತಿತ್ವವನ್ನೇ ಮರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರನ್ನು ಪ್ರಾರ್ಥಿಸುವಾಗ ಪ್ರತಿಫಲದ ಅಪೇಕ್ಷೆ ಇಲ್ಲದೆ ಪ್ರಾರ್ಥಿಸಿದಾಗ ಮಾತ್ರ ನಿಜವಾದ ಅನುಗ್ರಹ ದೊರೆಯುತ್ತದೆ. ಅಲ್ಲದೆ ವಾಸ್ತು ಹಾಗೂ ಸರಳ ವಾಸ್ತು ಹೆಸರಿನಲ್ಲಿ ಮೂಢ ನಂಬಿಕೆಗಳಿಗೆ ಅವಕಾಶ ನೀಡಬಾರದು. ವಾಸ್ತು ಎಂದರೆ ವೈಜ್ಞಾನಿಕವಾಗಿ, ಆರೋಗ್ಯಕರವಾಗಿ, ನೆಮ್ಮದಿಯಿಂದ ಬದುಕುವ ವಿಧಾನವಾಗಬೇಕು. ಕಷ್ಟಪಟ್ಟು ನಿರ್ಮಿಸಿದ ಮನೆಯನ್ನು ವಾಸ್ತು ಹೆಸರಿನಲ್ಲಿ ಕೆಡವಿ ಆರ್ಥಿಕ ಸಂಕಷ್ಟ್ಟಕ್ಕೆ ಸಿಲುಕುವುದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಜನರು ವೈಜ್ಞಾನಿಕ ದೃಷ್ಟಿ ಕೋನದೊಂದಿಗೆ ಆಧ್ಯಾತ್ಮಿಕತೆ ಅಳವಡಿಸಿ ಕೊಳ್ಳಬೇಕು. ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿಗೆ ಗೌರವ ಭಾರತೀಯ ಸಂಸ್ಕೃತಿಯ ವಿವಿಧ ಆಚರಣೆಗಳು, ರುದ್ರಾಭಿಷೇಕ ಸೇರಿದಂತೆ ಧಾರ್ಮಿಕ ವಿಧಿಗಳನ್ನು ಕಲಿಯಲು ದೇಶ ವಿದೇಶಗಳಲ್ಲಿ ಜನರು ಆಸಕ್ತಿ ತೋರುತ್ತಿರುವುದು ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೆ ಸಾಕ್ಷಿಯಾಗಿದೆ. ನೂರಾರು ವಷರ್ಗಳ ತಪಸ್ಸು, ಹೋರಾಟ, ಭಕ್ತಿಯ ಪ್ರತಿಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿರುವುದು ಹೆಮ್ಮೆಯ ಪ್ರತೀಕವಾಗಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಲಪ್ಪ ಮಾತನಾಡಿ, ಗುರು ಪರಂಪರೆಯಲ್ಲಿ ಸಂತರು, ಫಕೀರರು, ಅವಧೂತರು, ಮಹಾನ್ ಪುರುಷರು ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಅದೇ ರೀತಿ ಶ್ರೀ ಅರ್ಜುನ ಅವಧೂತ ಮಹಾರಾಜರು ವಿವಿಧ ಪೂಜಾ ಕಾರ್ಯಗಳಲ್ಲಿ ಸಮಾಜದ ಎಲ್ಲ ವರ್ಗದವರಿಗೂ ಅವಕಾಶ ನೀಡುವ ಮೂಲಕ ಸಮಾನತೆಯ ಸಂದೇಶ ಸಾರುತ್ತಿರುವುದು ಶ್ಲಾಘನೀಯ ಎಂದರು.
ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಬಿ.ಡಿ.ಅಶೋಕ್ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಗಿರೀಶ್, ಬಿದಿರು ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ್, ಡಾ,ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ತೀಥರ್ಂಕರ, ಆರ್ಯ ವೈಶ್ಯ ಮಂಡಳಿಯ ಸುಧೀಂದ್ರ, ನಾಗೇಂದ್ರ, ಬಾಬು ಸೇರಿದಂತೆ ಇತರರಿದ್ದರು.