ಚನ್ನರಾಯಪಟ್ಟಣದಲ್ಲಿ ನೂತನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸಚಿವ ಕೃಷ್ಣ ಬೈರೇಗೌಡ ಭೂಮಿಪೂಜೆ ನೆರವೇರಿಸಿದರು. ಸಂಸದ ಶ್ರೇಯಸ್ ಎಂ.ಪಟೇಲ್, ಎಂ.ಎ.ಗೋಪಾಲಸ್ವಾಮಿ, ಜೆ.ಎಂ.ರಾಮಚಂದ್ರ, ಎಂ.ಕೆ.ಮಂಜೇಗೌಡ, ಎಚ್.ಸಿ.ಲಲಿತ್‌ರಾಘವ್, ಪಟೇಲ್ ಶಿವಪ್ಪ ಇದ್ದರು.
ಚನ್ನರಾಯಪಟ್ಟಣ: ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಡಿ 1ಲಕ್ಷದ 20 ಸಾವಿರ ಕೋಟಿ ರೂ.ಹಣವನ್ನು ಜನರಿಗೆ ನೇರವಾಗಿ ನೀಡಲಾಗಿದೆ. ಜನರ ಕೈಗೆ ಇಷ್ಟೊಂದು ಹಣ ಕೊಟ್ಟ ಸರ್ಕಾರ ಪ್ರಪಂಚದಲ್ಲಿ ಇದ್ದರೆ ಅದು ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಪಟ್ಟಣದ ವಾರ್ಡ್ ನಂ.2 ರಲ್ಲಿನ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಡವರು, ರೈತರ ಪರವಾಗಿ ಕೆಲಸ ಮಾಡುತ್ತಿದೆ. 1ಲಕ್ಷದ 20 ಸಾವಿರ ಕೋಟಿ ರೂ.ಹಣವನ್ನು ಜನಗಳ ಕೈಗೆ ನೇರವಾಗಿ ಕೊಟ್ಟಿದ್ದೇವೆ. ಇದನ್ನು ಯಾವ ಸರ್ಕಾರವೂ ಪ್ರಪಂಚದಲ್ಲಿ ಮಾಡಿಲ್ಲ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಮಾಡಿದೆ. ಒಬ್ಬ ಏಜೆಂಟ್ ಇಲ್ಲ, ಮಧ್ಯವರ್ತಿ ಇಲ್ಲ, ಕಮಿಷನ್ ಇಲ್ಲ. ಯಾವ ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲದಂತೆ ಕೊಟ್ಟ ಮಾತಿನಂತೆ ನಡೆದುಕೊಂಡು ಗ್ಯಾರಂಟಿಗಳನ್ನು ಸಮರ್ಪಕವಾಗಿ ನೀಡಿದ ಸರ್ಕಾರ ನಮ್ಮದು. ಇನ್ನೂ ಕೆಲವು ರಾಜ್ಯಗಳಲ್ಲಿ ಘೋಷಣೆ ಮಾಡಿಯೂ ಮಾಡಲಾಗಿಲ್ಲ ಎಂದರು.
ಒಂದು ಕುಟುಂಬಕ್ಕೆ ತಿಂಗಳೊಂದಕ್ಕೆ ಐದಾರು ಸಾವಿರ ರೂ.ಸಿಗುತ್ತಿದೆ. ಇಂತಹ ಯೋಜನೆ ಯಾರೂ ಮಾಡಿಲ್ಲ. ಜಾತಿ, ಪಕ್ಷ ನೋಡಿಲ್ಲ. ಎಲ್ಲರಿಗೂ ಸಮಾನವಾಗಿ ಮಾಡಿಕೊಟ್ಟಿದ್ದೇವೆ. ಎಲ್ಲರೂ ನಮ್ಮವರೇ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ. ಆಗ ಮಾತ್ರ ರಾಜ್ಯ ಅಭಿವೃದ್ಧಿ ಆಗಲು ಸಾಧ್ಯ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೂ ಸಿಗುತ್ತಿರುವ ಸೌಲಭ್ಯಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಪಕ್ಷ ಸಂಘಟನೆಗೆ ಮುಂದಾಗುವಂತೆ ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಮಾಡುವುದು ಕಾರ್ಯಕರ್ತರು ಹಾಗೂ ಮುಖಂಡರ ದಶಕಗಳ ಕನಸಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ ನಾಯಕತ್ವದಲ್ಲಿ ನನಸಾಗುತ್ತಿದೆ. ಪಕ್ಷದ ಅನುದಾನದ ಜತೆಗೆ ಕಾರ್ಯಕರ್ತರು, ಮುಖಂಡರು ನೀಡುವ ಸಹಕಾರದಿಂದ ಎರಡಂತಸ್ತಿನ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು. ಎರಡನೇ ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲೆಂದು ಕೋಚಿಂಗ್ ತರಗತಿ, ಮಹಿಳೆಯರು, ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘಗಳ ಸದಸ್ಯೆಯರಿಗೆ ತರಬೇತಿ ನೀಡುವ ಉದ್ದೇಶವಿದೆ ಎಂದರು.
ಸಂಸದ ಶ್ರೇಯಸ್ ಎಂ.ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಎಂ.ರಾಮಚಂದ್ರ, ಎಂ.ಕೆ.ಮಂಜೇಗೌಡ, ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಎಚ್.ಸಿ.ಲಲಿತ್‌ರಾಘವ್, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಸಿ.ವಿ.ರಾಜಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ, ಕಾಂಗ್ರೆಸ್ ಮುಖಂಡರಾದ ಎಂ.ಶಂಕರ್, ಎಚ್.ಕೆ.ಮಹೇಶ್, ಜಾವಗಲ್ ಮಂಜುನಾಥ್, ಎಚ್.ಎಸ್.ವಿಜಯ್‌ಕುಮಾರ್, ಜಿ.ಆರ್.ಮೂರ್ತಿ, ಎಂ.ಎ.ರಂಗಸ್ವಾಮಿ, ಅಣತಿ ಆನಂದ್‌ಕುಮಾರ್, ಕಾರ್ಯಕರ್ತರು ಉಪಸ್ಧಿತರಿದ್ದರು.