ಬೇಲೂರು ತಾಲೂಕು ಕಚೇರಿಯಲ್ಲಿ ಬಸವೇಶ್ವರ ಜಯಂತಿಗೆ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಖಂಡಿಸಿ ತಾಲೂಕು ಕಚೇರಿ ಮುಂದೆ ವೀರಶೈವ-ಲಿಂಗಾಯತ ಮುಖಂಡರು ಪ್ರತಿಭಟನೆ ನಡೆಸಿದರು.  
ಹಾಸನ

ಅಧಿಕಾರಿಗಳಿಂದ ಕಾಟಾಚಾರಕ್ಕೆ ಕಾರ್ಯಕ್ರಮ

ಬೇಲೂರು : ಬಸವಣ್ಣರ ಪ್ರತಿಮೆಗೆ ಸರಿಯಾಗಿ ಪುಷ್ಪಾಲಂಕಾರ ಮಾಡದೆ ಹಾಗೂ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳ ಗೈರಾಗಿರುವುದನ್ನು ಖಂಡಿಸಿ ವೀರಶೈವ-ಲಿಂಗಾಯತ ಮಹಾಸಭ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ವಿಕ್ರಂಕೌರಿ ನೇತೃತ್ವದಲ್ಲಿ ಬಸವ ಜಯಂತಿ ಕಾರ್ಯಕ್ರಮ ಬಹಿಷ್ಕರಿಸಿ, ತಾಲೂಕು ಕಚೇರಿ ಮುಂದೆ ಮುಖಂಡರು ಸೋಮವಾರ ಪ್ರತಿಭಟಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿಯಲ್ಲಿ ಬಸವ ಜಯಂತಿ ಆಚರಿಸಲು ಸಿದ್ಧತೆ ನಡೆದಿತ್ತು. ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು, ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ವಿಕ್ರಂಕೌರಿ, ರಾಷ್ಟ್ರೀಯ ಉಪಾಧ್ಯಕ್ಷೆ ಚಂದ್ರಕಲಾ ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿ, ಬಸವೇಶ್ವರರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ರಾಷ್ಟ್ರೀಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿದರು.
ನಂತರ ಬೇರೆ ಮುಖಂಡರು ಮಾತನಾಡಿ, ಎನ್ನುತಿದ್ದಂತೆ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ವಿಕ್ರಂಕೌರಿ, ತಾಲೂಕು ಉಪಾಧ್ಯಕ್ಷ ಯೋಗೇಶ್, ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಮುಖಂಡರು ಬಿಟ್ಟರೆ ಶಾಸಕರು ಬಂದಿಲ್ಲ. ಬೆರಳೆಣಿಕೆ ಅಧಿಕಾರಿ, ಸಿಬ್ಬಂದಿ ಬಂದಿದ್ದಾರೆ, ಬೇರೆಯವರು ಏಕೆ ಬಂದಿಲ್ಲ ಎಂದು ಶಿರಸ್ತೇದಾರ್ ಶ್ವೇತಾ ಅವರನ್ನು ತರಾಟೆ ತೆಗೆದುಕೊಂಡರು. ಈ ಸಂದರ್ಭ ಕೆಲ ಮುಖಂಡರು ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕಾರ್ಯಕ್ರಮಕ್ಕೆ ಬಾರದಿದ್ದವರಿಗೆ ನೋಟಿಸ್ ಕೊಡಬೇಕೆಂದು ಎಚ್ಚರಿಸಿ, ಈಗ ಕಾರ್ಯಕ್ರಮ ಮುಂದುವರಿಸೋಣ ಎಂದರೂ ಕೇಳದೆ ಸಭೆಯಲ್ಲಿದ್ದ ಬಹುತೇಕ ಮುಖಂಡರು ಸಭೆ ಬಹಿಷ್ಕರಿಸಿ ಹೊರನಡೆದು ತಾಲೂಕು ಆಡಳಿತದ ವಿರುದ್ಧ ದಿಕ್ಕಾರ ಕೂಗಿ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಎಚ್.ಕೆ.ಸುರೇಶ್, ಪ್ರತಿಭಟನಾಕಾರರ ಜತೆ ಅವರೂ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆಯಲ್ಲಿ ಬಾಗಿಯಾಗಿದರು.
ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ವಿಕ್ರಂಕೌರಿ ಮಾತನಾಡಿ, ತಾಲೂಕು ಆಡಳಿತದಿಂದ ಆಚರಿಸುವ ಬಸವಣ್ಣರ ಜಯಂತಿಗೆ ವೀರಶೈವ- ಲಿಂಗಾಯತರು ಹೊರತುಪಡಿಸಿದರೆ ಯಾವುದೇ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಬಂದಿಲ್ಲ. ಬೆರಳೆಣಿಕೆ ಸಿಬ್ಬಂದಿ ಇದ್ದಾರೆ. ಪ್ರತಿವರ್ಷ ಇದೇ ರೀತಿ ಆದರೆ ಏಕೆ ಇಲ್ಲಿ ಮಹನೀಯರ ಜಯಂತಿ ಆಚರಿಸಿ ಅವಮಾನಿಸುತ್ತೀರಾ. ಸರ್ಕಾರದ ಆದೇಶವನ್ನೂ ಮೀರಿ ಇಲ್ಲಿ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಯಾರು ಬಂದಿಲ್ಲವೋ ಅವರ ವಿರುದ್ಧ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದೆ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆಂದು ಎಚ್ಚರಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಬಸವೇಶ್ವರ ವೃತ್ತದಲ್ಲಿ ಮಾಲಾರ್ಪಣೆ ಮಾಡಿದ ನಂತರ ತಾಲೂಕು ಆಡಳಿತದ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಬಂದರೆ ಇಲ್ಲಿ ವ್ಯವಸ್ಥೆ ಇಲ್ಲ. ಮೊದಲಿಗೆ ಪೂರ್ವಭಾವಿ ಸಭೆ ಕರೆಯಬೇಕಿತ್ತು, ಅದನ್ನೂ ಮಾಡಿಲ್ಲ. ನಾನು ಇಲ್ಲಿಗೆ ಬರಬಾರದೆಂದು ಕೊಂಡಿದ್ದೆ, ಮುಖಂಡರ ಮಾತಿಗೆ ಬೆಲೆ ಕೊಟ್ಟು ಬಂದೆ. ಏ.14 ರಂದು ಅಂಬೇಡ್ಕರ್‌ಗೆ ಅವಮಾನಿಸಿದ್ರು. ಆದರೆ ಇಂದು ವಿಶ್ವ ಗುರು ಬಸವಣ್ಣನವರಿಗೆ ಅವಮಾನಿಸಿದ್ದಾರೆ. ಇಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣರಿಗೆ ಅವಮಾನಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕು. ಮುಂದೆ ಸಮಾಜದವರು ಏನು ನಿರ್ದಾರ ಕೈಗೊಳ್ಳುತ್ತಾರೆ ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಉಪಾಧ್ಯಕ್ಷ ಯೋಗೇಶ್ ಮಾತನಾಡಿದರು. ವೀರಶೈವ ಮುಖಂಡರಾದ ಅರುಣ್ ಕುಮಾರ್, ಮದನ್, ಹರೀಶ್, ಚೇತನ್ ಕುಮಾರ್, ಬಸವರಾಜು, ಇಂಪು ಸಂತೋಷ್, ರೇಖಾ ಬಸವರಾಜು, ವಿರುಪಾಕ್ಷ ಇತರರಿದ್ದರು.